ಪರಿವರ್ತನ್ ಪ್ರಭ:
ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಿಗೆ ಜಾಮೀನು ಮಂಜೂರು ಮಾಡಿರುವ ಮಧ್ಯಪ್ರದೇಶ ಹೈಕೋರ್ಟ್, ಪ್ರತಿ ತಿಂಗಳ ಮೊದಲ ಮತ್ತು ನಾಲ್ಕನೇ ಮಂಗಳವಾರದಂದು ಭೋಪಾಲ್ ಪೊಲೀಸ್ ಠಾಣೆಯ ರಾಷ್ಟ್ರಧ್ವಜಕ್ಕೆ 21 ಬಾರಿ ನಮಸ್ಕರಿಸುವಂತೆ ಸೂಚಿಸಿದೆ.
ಪಾಕ್ ಪರ ಘೋಷಣೆ ಕೂಗಿದ ಆರೋಪದ ಮೇಲೆ ಫೈಝಲ್ ಅಲಿಯಾಸ್ ಫೈಜಾನ್ ವಿರುದ್ಧ ಕಳೆದ ಮೇ ತಿಂಗಳಿನಲ್ಲಿ ಭೋಪಾಲ್‌ನ ಮಿಸ್ರೋಡ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಭಾರತೀಯ ದಂಡ ಸಂಹಿತೆ ಸೆಕ್ಷನ್ 153ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಪಲಿವಾಲ್ ಅವರು, ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ. 50 ಸಾವಿರ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಇಷ್ಟೇ ಮೌಲ್ಯಕ್ಕೆ ಒಬ್ಬರ ಭದ್ರತೆ ಒದಗಿಸಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.
ತಾನು ಹುಟ್ಟಿ ಬೆಳೆದ ದೇಶದ ವಿರುದ್ಧ ಬಹಿರಂಗವಾಗಿ ಘೋಷಣೆಗಳನ್ನು ಆರೋಪಿ ಕೂಗಿದ್ದಾನೆ ಎಂದು ಹೇಳಿರುವ ನ್ಯಾಯಾಲಯ, ‘ವಿಚಾರಣೆ ಮುಗಿಯುವರೆಗೂ ಆರೋಪಿಯು ಪ್ರತಿ ತಿಂಗಳ ಮೊದಲ ಮತ್ತು ನಾಲ್ಕನೇ ಮಂಗಳವಾರ ಭೋಪಾಲ್‌ನ ಮಿಸ್ರೋಡ್ ಪೊಲೀಸ್ ಠಾಣೆಯ ಮುಂದೆ ಹಾಜರಾಗಬೇಕು. ಭಾರತ್ ಮಾತಾ ಕೀ ಜೈ ಘೋಷಣೆ ಕೂಗುವ ಮೂಲಕ ಠಾಣೆಯ ಮೇಲೆ ಹಾರಿಸಿರುವ ರಾಷ್ಟ್ರಧ್ವಜಕ್ಕೆ 21 ಬಾರಿ ನಮಸ್ಕರಿಸಬೇಕು’ ಎಂದು ಸೂಚಿಸಿದೆ.
‘ಇದು ಆತನಿಗೆ ತಾನು ಹುಟ್ಟಿ ಬೆಳೆದ ದೇಶದ ಬಗ್ಗೆ ಜವಾಬ್ದಾರಿ ಮತ್ತು ಹೆಮ್ಮೆಯ ಭಾವನೆಯನ್ನು ಉಂಟುಮಾಡಬಹುದು’ ಎಂದು ಅಭಿಪ್ರಾಯಪಟ್ಟಿದೆ.
ಆರೋಪಿಗೆ ವಿರುದ್ಧ 14 ಕ್ರಿಮಿನಲ್ ಪ್ರಕರಣಗಳಿದ್ದು, ಜಾಮೀನು ಮಂಜೂರು ಮಾಡಬಾರದು ಎಂದು ರಾಜ್ಯ ಸರ್ಕಾರದ ವಕೀಲರು ವಾದಿಸಿದ್ದಾರೆ.

Lovely site! I am loving it!! Will be back later to read some more. I am taking your feeds also