ಜೈಲಿನಿಂದ ವಿಡಿಯೊ ಕಾಲ್: 10 ದಿನಗಳಲ್ಲಿ ತನಿಖಾ ವರದಿಗೆ ಸೂಚನೆ

ಪರಿವರ್ತನ್ ಪ್ರಭ:

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೆಲ ಕೈದಿಗಳು ಸ್ಮಾರ್ಟ್‌ಫೋನ್‌ ಬಳಸಿ ತಮ್ಮ ಸ್ನೇಹಿತರಿಗೆ ವಿಡಿಯೊ ಕರೆ ಮಾಡಿದ ಪ್ರಕರಣ ಸಂಬಂಧ ಕಾರಾಗೃಹಗಳು ಹಾಗೂ ಸುಧಾರಣಾ ಸೇವೆಗಳ ಇಲಾಖೆ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕಿ (ಎಡಿಜಿಪಿ) ಮಾಲಿನಿ ಕೃಷ್ಣಮೂರ್ತಿ ಅವರು ಮಂಗಳವಾರ ಜೈಲಿಗೆ ಭೇಟಿ ನೀಡಿ ಪರಿಶೀಲಿಸಿದರು.

ಜೈಲಿನ ಒಳ ಹೋಗುತ್ತಿದ್ದಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮಾಲಿನಿ, ‘ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಪ್ರಕರಣ ನಡೆದ ಬಳಿಕವೂ ಎಚ್ಚೆತ್ತುಕೊಂಡಿಲ್ಲವಾ? ಕೈದಿಗಳಿಂದ ವಿಡಿಯೊ ಕಾಲ್‌ ಹೋಗುತ್ತಿದೆ ಎಂದರೆ ಏನರ್ಥ?’ ಎಂದು ಪ್ರಶ್ನಿಸಿದರು.

ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ. ಅವರೊಂದಿಗೆ ಜೈಲು ತಪಾಸಣೆ ಮಾಡಿ, ಅಧೀಕ್ಷಕರ ಜತೆಗೆ ಸಮಾಲೋಚನೆ ನಡೆಸಿ ಮಾಹಿತಿ ಪಡೆದುಕೊಂಡು ಹೊರಬಂದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ವಿಡಿಯೊ ಕಾಲ್‌ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವುದಿಲ್ಲ. ಈಗಾಗಲೇ ಪ್ರಾಥಮಿಕ ತನಿಖೆಗೆ ಆದೇಶಿಸಿದ್ದು, 10 ದಿನಗಳ ಗಡುವು ಸಹ ನೀಡಲಾಗಿದೆ. ವರದಿಯಲ್ಲಿ ಅಧಿಕಾರಿಗಳ ಪಾತ್ರ ಕಂಡುಬಂದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

‘ಜೈಲಿನ ಮುಖ್ಯ ಅಧೀಕ್ಷಕಿಯಾಗಿ ಆರ್.ಅನಿತಾ ಅವರು ಸೋಮವಾರವಷ್ಟೇ ಅಧಿಕಾರ ವಹಿಸಿಕೊಂಡಿದ್ದಾರೆ. ಜೈಲಿನ ಭದ್ರತೆ ಮತ್ತು ತಪಾಸಣೆ ವ್ಯವಸ್ಥೆ ಬಿಗಿಗೊಳಿಸುವಂತೆ ಸೂಚಿಸಿದ್ದೇನೆ. ಈಗಿರುವ 2ಜಿ ಜಾಮರ್ ಬದಲಿಗೆ 5ಜಿ ಜಾಮರ್ ಅಳವಡಿಸಲಾಗುವುದು’ ಎಂದು ತಿಳಿಸಿದರು.

‘ರಾಜ್ಯದಲ್ಲಿ 54 ಜೈಲುಗಳಿದ್ದು ಮೇಲ್ವಿಚಾರಣೆಗೆ ಸಿಬ್ಬಂದಿ ಕೊರತೆ ಇದೆ. ಒಬ್ಬೊಬ್ಬ ಡಿಐಜಿಗೆ 26ರಿಂದ 28 ಜೈಲುಗಳು ಬರುತ್ತವೆ. ಹೀಗಾಗಿ, ಮೇಲ್ವಿಚಾರಣೆ ಹಾಗೂ ಸಿಬ್ಬಂದಿ ಸಂಖ್ಯೆ ಹೆಚ್ಚಿಸಿ, ತರಬೇತು ಕೊಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದರು.
ಕೈದಿಗಳಾದ ಸಾಗರ್ ಶಿವಪ್ಪ, ಸುನೀಲ್ ದೇವದಾಸ್, ನಾಗೇಶ ಕರಬಸಪ್ಪ, ವಿಚಾರಣಾಧೀನ ಕೈದಿಗಳಾದ ವಿಶಾಲ್, ಜುಲ್ಫಿಕರ್, ಜಮೀರ್ ಸೇರಿ ಇತರರ ವಿರುದ್ಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *