ಮುಡಾ ಹಗರಣ: 5000 ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದ ಸ್ನೇಹಮಯಿ ಕೃಷ್ಣ

ಪರಿವರ್ತನ್ ಪ್ರಭ:

ಮುಡಾ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ 12 ಅಧಿಕಾರಿಗಳ ನೇತೃತ್ವದ ಇಡಿ ತಂಡ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕಚೇರಿ ಮೇಲೆ ದಾಳಿ ನಡೆಸಿದೆ. ಈ ಮೂಲಕ ಮುಡಾ ಹಗರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಅಕ್ರಮ ಹಣ ವರ್ಗಾವಣೆಯಾಗಿರುವ ಬಗ್ಗೆ ಜಾರಿ ನಿರ್ದೇಶನಾಲಯ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದೆ.
ಮುಡಾ ಆಯುಕ್ತ ರಘುನಂದನ್, ನಗರ ಯೋಜಕ ಸದಸ್ಯ, ವಿಶೇಷ ಭೂ‌ಸ್ವಾಧೀನ ಅಧಿಕಾರಿಗಳ ಜತೆ ಇಡಿ ಅಧಿಕಾರಿಗಳು ಸಭೆ ನಡೆಸುತ್ತಿದ್ದಾರೆ. ಮುಡಾ ಅಧಿಕಾರಿಗಳ ಸಭೆ ಬಳಿಕ ಕಡತಗಳನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಮುಡಾದಲ್ಲಾಗಿರುವ 50-50 ಅನುಪಾತದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳ ವಿಚಾರಣೆ ನಡೆಸಲಿದ್ದಾರೆ. ಹಿಂದಿನ ಇಬ್ಬರು ಮುಡಾ ಅಧಿಕಾರಿಗಳಾದ ಡಾ.ಡಿ.ಬಿ.ನಟೇಶ್ ಹಾಗೂ ಜಿ.ಡಿ.ದಿನೇಶ್ ಕುಮಾರ್ ಇಬ್ಬರನ್ನು ಕೂಡ ವಶಕ್ಕೆ ಪಡೆಯುವ ಸಾಧ್ಯತೆ ಇದೆ.

ಇಡಿ ಅಧಿಕಾರಿಗಳ ದಾಳಿ ಬೆನ್ನಲ್ಲೇ ಮುಡಾ ಕಚೇರಿಗೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಇಡಿ ಅಧಿಕಾರಿಗಳ ಜೊತೆ ಸಿಆರ್ ಪಿಎಫ್ ಯೋಧರು ಆಗಮಿಸಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ಸೆಕ್ಯುರಿಟಿ ಫೋರ್ಸ್ ಅಧಿಕಾರಿಗಳು,‌ ಸಿಆರ್ ಪಿಎಫ್ ಅಧಿಕಾರಿಗಳಿಗೆ ಸ್ಥಳೀಯ ಪೊಲೀಸರು ಕೂಡ ಜೊತೆಯಾಗಿದ್ದಾರೆ. ಮುಡಾ ಕಚೇರಿ ಒಳಗೆ ಪ್ರವೇಶಿಸಲು ಯಾರಿಗೂ ಅವಕಾಶ ಕೊಡುತ್ತಿಲ್ಲ, ಸಾರ್ವಜನಿಕ ಸೇವೆಗಳು ಕೂಡ ಲಭ್ಯವಿಲ್ಲ ಎಂದು ವಾಪಸ್ ಕಳಿಸಲಾಗುತ್ತಿದೆ.

ಮುಡಾ ಕಾರ್ಯದರ್ಶಿ ಪ್ರಸನ್ನ ಕುಮಾರ್ ಮಾತನಾಡಿ,ಇಡಿ ಅಧಿಕಾರಿಗಳು ಬೆಳಗ್ಗೆ ಬಂದಿದ್ದಾರೆ. ದಾಖಲೆಗಳನ್ನು ಕೇಳಿದ್ದಾರೆ. ನಾವು ಅವರಿಗೆ ಎಲ್ಲವನ್ನೂ ಒದಗಿಸುತ್ತಿದ್ದೇವೆ, ಅವರು ಕೇಳಿದ ಎಲ್ಲಾ ಮಾಹಿತಿ ನೀಡಿದ್ದೇವೆ. ಏನನ್ನೂ ಮಾತನಾಡಬಾರದು ಎಂದು ಸೂಚನೆ ಕೊಟ್ಟಿದ್ದಾರೆ. ಆ ಕಾರಣಕ್ಕೆ ನಾವು ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇಡಿ ತಂಡಕ್ಕೆ ಸಿಆರ್ ಪಿಎಫ್ ಯೋಧರಿಂದ ರಕ್ಷಣೆ ಒದಗಿಸಲಾಗಿದೆ. ಸಿಆರ್ ಪಿಎಫ್ ಯೋಧರ ಭದ್ರತೆಯೊಂದಿಗೆ ಮುಡಾ ಕಚೇರಿಯಲ್ಲಿ ಇಡಿ ಅಧಿಕಾರಿಗಳ ತಂಡ ತನಿಖೆ ನಡೆಸುತ್ತಿದ್ದಾರೆ. ಶನಿವಾರ ಕೂಡ ಪರಿಶೀಲನೆ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

₹5000 ಕೋಟಿ ಅಕ್ರಮ ನಡೆದಿದೆ ಎಂದು ಇಡಿ ಅಧಿಕಾರಿಗಳಿಗೆ ದೂರು ನೀಡಿದ್ದೆ. ಈ ಸಂಬಂಧಿಸಿದಂತೆ ಇಂದು ಇಡಿ ಅಧಿಕಾರಿಗಳು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ & ಮೈಸೂರು ತಾಲ್ಲೂಕು ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ ಎಂದು ಆರ್ ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.

ಮೈಸೂರಿನ ಮುಡಾ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ಅಧಿಕಾರಿಗಳು ಸಿದ್ದರಾಮಯ್ಯ 14 ಸೈಟ್‌ಗಳಿಗೆ ಮಾತ್ರ ಸಂಬಂಧಿಸಿದವುಗಳಲ್ಲ. 2015 ಇಸವಿಯಿಂದ ಇಲ್ಲಿಯವರೆಗೆ ನಡೆದಿರುವ ಅಕ್ರಮಗಳ ಬಗ್ಗೆ ಧಾಳಿ ಮಾಡಲಾಗಿದೆ. ಒಟ್ಟಾರೆ ಸುಮಾರು 5000 ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು ಆರೋಪಿಸಿದರು.

ಸೂಕ್ತ ದಾಖಲೆಗಳಿಲ್ಲದೆ ನಾನು ಯಾರ ವಿರುದ್ಧವೂ ಆರೋಪವನ್ನಾಗಲಿ, ಹೋರಾಟವನ್ನಾಗಲಿ ಮಾಡಲ್ಲ. ಕಾಂಗ್ರೆಸ್ ಆದರೂ ಸರಿ, ಬಿಜೆಪಿ ಆದರೂ ಸರಿ ಯಾರನ್ನೂ ನಾನು ಬಿಡುವುದಿಲ್ಲ, ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ ಎಂದು ಹೇಳಿದರು.

Leave a Reply

Your email address will not be published. Required fields are marked *