ಸಿಪಿ ಯೋಗೇಶ್ವರ ಪರ ಒಲವು ತೋರಿದ ಬಿಜೆಪಿ, ಎಚ್‌ಡಿಕೆ ಗೆ ಮುಳುವು ಗ್ಯಾರೆಂಟಿ!

ಪರಿವರ್ತನ್ ಪ್ರಭ:

ಉಪ ಚುನಾವಣೆ ಘೋಷಣೆ ಆದ ರಾಜ್ಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಚನ್ನಪಟ್ಟಣ ಪ್ರಮುಖ ರಾಜಕೀಯ ಶಕ್ತಿ ಕೇಂದ್ರವಾಗುವುದರಲ್ಲಿ ಎರಡು ಮಾತಿಲ್ಲ. ಮೊದಲಿನಿಂದಲೂ ಚನ್ನಪಟ್ಟಣ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವ ಬಿಜೆಪಿಯ ಸಿಪಿ ಯೋಗೇಶ್ವರ ಅವರು ಟಿಕೆಟ್ ಪಡೆಯುವಲ್ಲಿ ಭಾರೀ ಪ್ರಭಾವ ಬೀರಿದ್ದಾರೆ.

ಎಷ್ಟರ ಮಟ್ಟಿಗೆ ಎಂದರೆ ಬಿಜೆಪಿ ಗಾಳಿ ಯೋಗೇಶ್ವರ ಅವರತ್ತ ಬೀಸುತ್ತಿದೆ. ಅಂದರೆ ಅನೇಕ ನಾಯಕರು ಸಿಪಿವೈಗೆ ಟಿಕೆಟ್ ನೀಡುವಂತೆ ಬಹಿರಂಗವಾಗಿ ಮಾಡನಾಡುತ್ತಿದ್ದಾರೆ.

ಹೌದು, ಬಿಜೆಪಿ ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್ ಬೆನ್ನಲ್ಲೆ, ಸಂಸದ ಜಗದೀಶ್ ಶೆಟ್ಟರ್ ಅವರು, ಚನ್ನಪಟ್ಟಣ ಉಪಚುನಾವಣೆಯ ಟಿಕೆಟ್ ಅನ್ನು ಸಿಪಿ ಯೋಗೇಶ್ವರ ಅವರಿಗೆ ನೀಡುವಂತೆ, ಅವರ ಪರ ಒಲವು ವ್ಯಕ್ತಪಡಿಸಿದ್ದಾರೆ. ಈ ಮೂಲಕ ಮೈತ್ರಿ ಪಕ್ಷ ಜೆಡಿಎಸ್ ಹಾಗೂ ಎಚ್‌ಡಿ ಕುಮಾರಸ್ವಾಮಿ ಆಟ ನಡೆಯದಂತೆ ಮಾಡಲಾಗುತ್ತಿದೆ ಎಂಬ ಅನುಮಾನ ಮೂಡತೊಡಗಿದೆ.

ಏಕೆಂದರೆ ಬಿಜೆಪಿ-ಜೆಡಿಎಸ್ ಮೈತ್ರಿಗೂ ಮೊದಲು ಕಾಂಗ್ರೆಸ್ ಮಾತ್ರವಲ್ಲದೇ, ಬಿಜೆಪಿಯು ಹಳೇ ಮೈಸೂರು ಭಾಗದಲ್ಲಿ ಕಣ್ಣಿಟ್ಟಿತ್ತು. ಇದೀಗ ಆ ಕನಸು ನನಸು ಮಾಡಿಕೊಳ್ಳಲು ಒಳಗೊಳಗೇ ಪ್ಲಾನ್ ಮಾಡಿಕೊಳ್ಳಲಾಗುತ್ತಿದೆ ಅಂತಲೂ ವಿಶ್ಲೇಷಣೆ ಕೇಳಿ ಬಂದಿದೆ. ಹಾಗಾದರೆ ಸಿಪಿವೈ ಪರ ಜಗದೀಶ್ ಶೆಟ್ಟರ್ ಹೇಳಿದ್ದೇನು?

ಹುಬ್ಬಳ್ಳಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಕ್ಷೇತ್ರದಲ್ಲಿ ಸಿಪಿ ಯೋಗೇಶ್ವರ ಅವರು ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಪಕ್ಷ ಸಂಘಟನೆಗೂ ಅವರ ಕೊಡುಗೆ ಇದೆ. ಕ್ಷೇತ್ರದಲ್ಲಿ ಅವರಿಗೆ ಹಿಡಿತ ಇದೆ ಎಂದ ಅವರು, ಈ ಉಪಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡುವುದು ಸೂಕ್ತ ಎಂದು ಅಭಿಪ್ರಾಯ ಹೊರ ಹಾಕಿದ್ದಾರೆ.

ಇದಷ್ಟೇ ಅಲ್ಲದೇ ಸಿಪಿ ಯೋಗೇಶ್ವರ ಅವರು, ಚೆನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕು. ಬಿಜೆಪಿ ಜೆಡಿಎಸ್ ಗೆಲ್ಲಲು ಅವರಿಗೆ ಟಿಕೆಟ್ ನೀಡದರೆ ಅನುಕೂಲವಾಗಲಿದೆ. ಕಾಂಗ್ರೆಸ್ ವಿರುದ್ಧ ಗೆಲ್ಲುವ ಶಕ್ತಿ ಅವರಿಗೆ ಇದೆ. ನಾವು ಏನೇ ಹೇಳಿದರು, ಕೊನೆಗೆ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದೆ. ಮೂರು ಉಪ ಚುನಾವಣೆ ಕ್ಷೇತ್ರಗಳಿಗೆ ಯಾರನ್ನು ಕಣಕ್ಕಿಳಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.

Leave a Reply

Your email address will not be published. Required fields are marked *