ಬೆಂಗಳೂರಿನ ಶಾಲಾ-ಕಾಲೇಜುಗಳಿಗೆ ‘ಬಾಂಬ್ ಬೆದರಿಕೆ’ ಹಾಕಿದ್ದ ಖತರ್ನಾಕ್ ಆರೋಪಿ ಅರೆಸ್ಟ್!

ಪರಿವರ್ತನ್ ಪ್ರಭ:

ಬೆಂಗಳೂರು ನಗರದ ಹಲವು ಕಾಲೇಜುಗಳಿಗೆ ಬಾಂಬ್ ಇರಿಸಲಾಗಿದೆ ಎಂಬುದಾಗಿ ಬೆದರಿಕೆಯ ಇ-ಮೇಲ್ ಕಳುಹಿಸಲಾಗಿತ್ತು. ಆ ಬಳಿಕ ಕಾಲೇಜುಗಳಲ್ಲಿ ಪರಿಶೀಲಿಸಲಾಗಿ, ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದಾಗಿ ಪೊಲೀಸರು ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಕಾಲೇಜುಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಮುಖಾಂತರ ಬೆದರಿಕೆ ಸಂದೇಶ ಕಳುಹಿಸುತ್ತಿದ್ದ ಓರ್ವ ವ್ಯಕ್ತಿಯನ್ನ ಬಂಧಿಸಲಾಗಿದೆ.

ಇಂದು ಪತ್ರಿಕಾ ಪ್ರಕಟಣೆಯಲ್ಲಿ ಬೆಂಗಳೂರು ನಗರ ಪೊಲೀಸರು ಮಾಹಿತಿ ಹಂಚಿಕೊಂಡಿದ್ದು, ದಿನಾಂಕ:04/10/2024 ರಂದು ವಿ.ವಿ.ಪುರಂ ಠಾಣಾ ಸರಹದ್ದಿನಲ್ಲಿರುವ ಬೆಂಗಳೂರು ಇನ್ಸ್‌ಟ್ಯೂಟ್ ಆಫ್ ಟೆಕ್ನಾಲಜಿ (ಬಿ.ಐ.ಟಿ) ಕಾಲೇಜಿನ ಪ್ರಾಂಶುಪಾಲರು ಹಾಜರಾಗಿ ಲಿಖಿತ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ದಿನಾಂಕ:04/10/2024 ರಂದು ಕಾಲೇಜಿನ ಆವರಣದಲ್ಲಿ ಹೈಡ್ರೋಜನ್‌ ಆಧಾರಿತ ಸುಧಾರಿತ ಐಇಡಿ ಗಳನ್ನು ಇಟ್ಟಿರುವುದಾಗಿ ಇ-ಮೇಲ್ ಐಡಿ s_ve sekr@hotmail.com ನಿಂದ ಬೆದರಿಕೆಯ ಇ ಮೇಲ್ ಸಂದೇಶವೊಂದು ಬಂದಿದ್ದು, ಈ ಕುರಿತು ಇ-ಮೇಲ್ ಕಳುಹಿಸಿರುವ ವ್ಯಕ್ತಿಯನ್ನು ಪತ್ತೆಮಾಡಿ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ತಿಳಿಸಿರುತ್ತಾರೆ. ಈ ಕುರಿತು ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಎಂದಿದ್ದಾರೆ.

ಇದೇ ಪ್ರಕಾರ ದಿನಾಂಕ:04/10/2024 ರಂದು ಹನುಮಂತನಗರ ಪೊಲೀಸ್ ಠಾಣಾ ಸರಹದ್ದಿನ ಬಿ.ಎಂ.ಎಸ್ ಕಾಲೇಜಿನ ಪ್ರಾಂಶುಪಾಲರು ಸಹ ದೂರನ್ನು ಸಲ್ಲಿಸಿದ್ದು, ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿರುತ್ತದೆ.
ಮೇಲೆ ತಿಳಿಸಿದ ಎರಡು ಪ್ರಕರಣಗಳ ತನಿಖೆಯನ್ನು ತಾಂತ್ರಿಕ ವಿಧಾನಗಳಿಂದ ಕೈಗೊಂಡು, ತನಿಖಾ ಕಾಲದಲ್ಲಿ ಈ ಪ್ರಕರಣದ ಓರ್ವ ವ್ಯಕ್ತಿಯನ್ನು ದಿನಾಂಕ:17/10/2024 ರಂದು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆ, ಸಾಲ್‌ರಿ ಟೌನ್‌ನಲ್ಲಿ ವಶಕ್ಕೆ ಪಡೆದುಕೊಂಡು, ಆತನನ್ನು ವಿಚಾರಣೆಗೊಳಪಡಿಸಿದಾಗ, ಈ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ. ಆರೋಪಿಯು ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಒಂದು ಹೆಚ್.ಪಿ ಕಂಪನಿಯ ಲ್ಯಾಪ್‌ಟಾಪ್ ಮತ್ತು ಒಂದು ನೋಕಿಯಾ ಮೊಬೈಲ್ ಫೋನ್‌ನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಆರೋಪಿಯನ್ನು ವಿಚಾರಣೆಗೊಳಪಡಿಸಿದಾಗ ಆರೋಪಿಯು 10 ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ತಿಳಿಸಿರುತ್ತಾನೆ. ಬೆಂಗಳೂರು ನಗರದ ವಿವಿಧ ಶಾಲಾ ಕಾಲೇಜುಗಳಲ್ಲಿ ಬಾಂಬ್‌ಗಳನ್ನು ಇಟ್ಟಿರುವುದಾಗಿ ಬೆದರಿಕೆಯ ಇ-ಮೇಲ್ ಕಳುಹಿಸಿರುವ ಸಂಬಂಧ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿಯೂ ಈ ಆರೋಪಿಯ ಪಾತ್ರದ ಬಗ್ಗೆ ತನಿಖೆಯನ್ನು ಕೈಗೊಳ್ಳಬೇಕಾಗಿರುತ್ತದೆ.

ದಿನಾಂಕ:17/10/2024 ರಂದು ಆರೋಪಿಯನ್ನು ಪಶ್ಚಿಮ ಬಂಗಾಳದ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಟ್ರ್ಯಾನ್ಸಿಟ್ ವಾರೆಂಟ್‌ಗೆ ಕೋರಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಿರುತ್ತೆ.
ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಲೊಕೇಶ್ ಬರಮಪ್ಪ ಜಗಲಸ‌, ಐ.ಪಿ.ಎಸ್ ರವರ ಮತ್ತು ವಿ.ವಿ.ಪುರಂ ಉಪ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರಾದ ಶಾಮೀದ್ ಪಾಷ ರವರ ಮಾರ್ಗದರ್ಶನದಲ್ಲಿ ಎ.ಎ.ಪುರಂ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಧರ್ಮೇಂದ್ರ ರವರ ನೇತೃತ್ವದ ಅಧಿಕಾರಿ/ಸಿಬ್ಬಂದಿಯವರ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ ಎಂದು ಹೇಳಿದೆ.

Leave a Reply

Your email address will not be published. Required fields are marked *