ಚನ್ನಪಟ್ಟಣ ಉಪ ಚುನಾವಣೆ: ಬಿಜೆಪಿಗೆ ಶುರುವಾಯ್ತು ಡಬಲ್ ಸಂಕಷ್ಟ!

ಪರಿವರ್ತನ್ ಪ್ರಭ:

ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ. ಭಾರೀ ಚರ್ಚೆಗೆ ಕಾರಣವಾಗಿರುವುದು ರಾಮನಗರ ಜಿಲ್ಲೆಯ ಚನ್ನಪಟ್ಟಣದ ಉಪ ಚುನಾವಣೆ. ನವೆಂಬರ್ 13ರಂದು ನಡೆಯುವ ಉಪ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಯಾರು? ಎಂಬುದು ಎಲ್ಲರ ಪ್ರಶ್ನೆ. ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಉರುಳಿಸಿರುವ ದಾಳದ ಪರಿಣಾಮ ಬಿಜೆಪಿ ಸಂಕಷ್ಟಕ್ಕೆ ಸಿಲುಕಿದೆ. ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 25 ಕೊನೆಯ ದಿನ.

2023ರ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಜೆಡಿಎಸ್‌ನ ಎಚ್. ಡಿ. ಕುಮಾರಸ್ವಾಮಿ ಗೆಲುವು ಸಾಧಿಸಿದರು. 2024 ಲೋಕಸಭೆ ಚುನಾವಣೆಯಲ್ಲಿ ಅವರು ಮಂಡ್ಯದಿಂದ ಕಣಕ್ಕಿಳಿದು ಗೆಲವು ಸಾಧಿಸಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈಗ ಉಪ ಚುನಾವಣೆ ಎದುರಾಗಿದೆ. ಆದರೆ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಯಾರು?.

ಚನ್ನಪಟ್ಟಣದ ಟಿಕೆಟ್‌ಗಾಗಿ ಬಿಜೆಪಿ ನಾಯಕ, ಎಂಎಲ್‌ಸಿ ಸಿ. ಪಿ. ಯೋಗೇಶ್ವರ ಚನ್ನಪಟ್ಟಣದಿಂದ ದೆಹಲಿ ತನಕ ಪ್ರಯತ್ನ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಎಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹೆಸರು ಮುಂಚೂಣಿಯಲ್ಲಿದೆ. ಕುಮಾರಸ್ವಾಮಿ ರಾಜಕೀಯ ದಾಳದ ಪರಿಣಾಮ ಬಿಜೆಪಿಗೆ ಎರಡು ಸಂಕಷ್ಟ ಎದುರಾಗಿದೆ.

ಬಿಜೆಪಿ ಸಂಕಷ್ಟ ಏನು?; ಚನ್ನಪಟ್ಟಣ ವಿಚಾರದಲ್ಲಿ ಸಿ. ಪಿ. ಯೋಗೇಶ್ವರ ಎದುರು ಹಾಕಿಕೊಂಡು ಉಪ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಲು ಬಿಜೆಪಿ ಸಿದ್ಧವಿಲ್ಲ. ಮತ್ತೊಂದು ಕಡೆ ಎಚ್. ಡಿ. ಕುಮಾರಸ್ವಾಮಿ ಅವರ ಮೈತ್ರಿ ಧರ್ಮದ ಮಾತು ಬಿಜೆಪಿಗೆ ಸಂಕಷ್ಟ ತಂದಿದೆ. ಆದ್ದರಿಂದ ಕ್ಷೇತ್ರವನ್ನು ಇಟ್ಟುಕೊಳ್ಳುವುದೋ, ಬಿಟ್ಟುಕೊಡುವುದೋ ಎಂಬ ಪ್ರಶ್ನೆ ಇದೆ. ರಾಜ್ಯ ನಾಯಕರು ವರಿಷ್ಠರ ತೀರ್ಮಾನದತ್ತ ಚಿತ್ತ ನೆಟ್ಟಿದ್ದಾರೆ.

ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪ್ರಭಾವ ಹೆಚ್ಚಿಸಿಕೊಳ್ಳುತ್ತಿರುವ ಜಿಲ್ಲೆಗಳಲ್ಲಿ ರಾಮನಗರ ಸಹ ಒಂದು. ಭವಿಷ್ಯದ ರಾಜಕೀಯ ದೃಷ್ಟಿಯಿಂದ ಪ್ರಭಾವ ಉಳಿಸಿಕೊಳ್ಳುವುದು ಅನಿವಾರ್ಯ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಡಾ. ಸಿ. ಎನ್. ಮಂಜುನಾಥ 1079002 ಮತಗಳನ್ನು ಪಡೆದು ಪಕ್ಷದ ಪ್ರಭಾವ ಇನ್ನಷ್ಟು ಹೆಚ್ಚಿಸಿದ್ದಾರೆ.

ಸಿ. ಪಿ. ಯೋಗೇಶ್ವರ 2023ರಲ್ಲಿ ಚನ್ನಪಟ್ಟಣದಲ್ಲಿ 80677 ಮತಗಳನ್ನು ಪಡೆದಿದ್ದರು. ಉಪ ಚುನಾವಣೆಯಲ್ಲಿ ಕ್ಷೇತ್ರವನ್ನು ಜೆಡಿಎಸ್‌ಗೆ ನೀಡಿದರೆ ಚನ್ನಪಟ್ಟಣ, ಜಿಲ್ಲೆಯಲ್ಲಿ ಬಿಜೆಪಿ ಪ್ರಭಾವ ಕಡಿಮೆಯಾಗಲಿದೆ ಎಂದು ಅವರು ಹೇಳುತ್ತಿದ್ದಾರೆ. ಇದನ್ನು ತಳ್ಳಿಹಾಕುವ ಸ್ಥಿತಿಯಲ್ಲಿ ಬಿಜೆಪಿ ನಾಯಕರು ಇಲ್ಲ ಎಂಬುದು ಮೊದಲ ಸಂಕಷ್ಟವಾಗಿದೆ.

ಎಚ್. ಡಿ. ಕುಮಾರಸ್ವಾಮಿ ಮೈತ್ರಿ ಧರ್ಮದ ಮಾತುಗಳನ್ನಾಡಿದ್ದಾರೆ. ಶಿಗ್ಗಾವಿ, ಸಂಡೂರಿನಲ್ಲಿ ಜೆಡಿಎಸ್ ಪ್ರಭಾವ ಇಲ್ಲ. ಮೈತ್ರಿಧರ್ಮದಂತೆ ಚನ್ನಪಟ್ಟಣ ಬಿಟ್ಟು ಮಂಡ್ಯದಲ್ಲಿ ಚುನಾವಣೆಗೆ ನಿಂತಿದ್ದೇನೆ. ಆದ್ದರಿಂದ ಚನ್ನಪಟ್ಟಣದ ಜೆಡಿಎಸ್‌ಗೆ ಬೇಕು ಎಂದು ಪಟ್ಟು ಹಿಡಿದಿರುವುದು ಬಿಜೆಪಿಗೆ ಎರಡನೇ ಸಂಕಷ್ಟವಾಗಿದೆ.

ಪಕ್ಷದ ಹೊರತಾಗಿಯೂ ಸಿ. ಪಿ. ಯೋಗೇಶ್ವರ ಚನ್ನಪಟ್ಟಣದಲ್ಲಿ ಪ್ರಭಾವ ಹೊಂದಿದ್ದಾರೆ. ಬಿಜೆಪಿ ಟಿಕೆಟ್ ಕೈತಪ್ಪಿ, ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟರೆ ಅವರ ಮುಂದಿನ ನಡೆ ಉಪ ಚುನಾವಣೆ ಮೇಲೆ ಪ್ರಭಾವ ಬೀರಲಿದೆ ಎನ್ನುವುದು ಸತ್ಯ. ಆದ್ದರಿಂದ ಮೈತ್ರಿಧರ್ಮವೋ, ಪಕ್ಷದ ಪ್ರಭಾವವೋ ಎಂದು ಬಿಜೆಪಿ ನಾಯಕರು ತಲೆಕೆಡಿಸಿಕೊಂಡಿದ್ದಾರೆ.

ಸಿ. ಪಿ. ಯೋಗೇಶ್ವರ ಅಭ್ಯರ್ಥಿಯಾಗಲು ಹೆಚ್. ಡಿ. ಕುಮಾರಸ್ವಾಮಿ ಒಪ್ಪುತ್ತಿಲ್ಲ. ಅವರ ಮನವೊಲಿಕೆ ಮಾಡಿ ಎಂದು ಬಿಜೆಪಿ ನಾಯಕರಿಗೆ ಹೇಳಿದ್ದಾರೆ. ಬಿಜೆಪಿ-ಜೆಡಿಎಸ್‌ ನಡುವಿನ ಜಟಾಪಟಿಯಲ್ಲಿ ಚನ್ನಪಟ್ಟಣ ಕಾಂಗ್ರೆಸ್ ಪಾಲಾದರೆ? ಎಂಬುದು ಬಿಜೆಪಿ ನಾಯಕರ ಆತಂಕವಾಗಿದೆ.

ಬಿಜೆಪಿ ನಾಯಕರ ಮೇಲೆ ನನಗೆ ವಿಶ್ವಾಸವಿದೆ. ಬಿಜೆಪಿ-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ನಾನೇ ಎಂದು ಸಿ. ಪಿ. ಯೋಗೇಶ್ವರ ಹೇಳುತ್ತಿದ್ದಾರೆ. ಆದರೆ ಇದಕ್ಕೆ ಜೆಡಿಎಸ್ ಒಪ್ಪಿಗೆ ನೀಡಲಿದೆಯೇ? ಎಂಬುದು ಪ್ರಶ್ನೆಯಾಗಿದೆ.

‘ಮೈಸೂರು ಚಲೋ’ ಬಳಿಕ ಚನ್ನಪಟ್ಟಣದ ಉಪ ಚುನಾವಣೆ ಚಿತ್ರಣ ಬದಲಾಗಿದೆ. 2019ರಲ್ಲಿ ಮಂಡ್ಯ, 2023ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಲ್ಲಿ ಸೋತ ನಿಖಿಲ್ ಕುಮಾರಸ್ವಾಮಿಯನ್ನು ಅಭ್ಯರ್ಥಿ ಮಾಡಿ ಚನ್ನಪಟ್ಟಣದಲ್ಲಿ ಪಕ್ಷದ ಪ್ರಭಾವ ಹಾಗೆ ಉಳಿಸಬೇಕು ಎಂಬುದು ಎಚ್. ಡಿ. ಕುಮಾರಸ್ವಾಮಿ ತಂತ್ರವಾಗಿದೆ.

Leave a Reply

Your email address will not be published. Required fields are marked *