ತಲಕಾವೇರಿಯಲ್ಲಿ ಸಂಭ್ರಮದ ತೀರ್ಥೋದ್ಭವ ಕಾರ್ಯಕ್ರಮ: ಬ್ರಹ್ಮಕುಂಡಿಕೆಯಲ್ಲಿ ದರ್ಶನ ನೀಡಿದ ಕಾವೇರಿ ಮಾತೆ

ಪರಿವರ್ತನ್ ಪ್ರಭ:

ಕನ್ನಡ ನಾಡಿನ ಜೀವನದಿ ಕಾವೇರಿಯ ಉಗಮ ಸ್ಥಳವಾದ ತಲಕಾವೇರಿಯಲ್ಲಿ ತುಲಾ ಸಂಕ್ರಮಣದ ವಿಶೇಷ ಶುಭ ದಿನದಂದು ಕಾವೇರಿಯ ಪವಿತ್ರ ತೀರ್ಥೋದ್ಭವವಾಗಿದೆ. ಭಾಗಮಂಡಲದ ತಲಕಾವೇರಿಯಲ್ಲಿ ಇಂದು ಬೆಳಗ್ಗೆ 7 ಗಂಟೆ 40 ನಿಮಿಷಕ್ಕೆ ಬ್ರಹ್ಮ ಕುಂಡಿಕೆಯಲ್ಲಿ ಕಾವೇರಿ ತಾಯಿ ದರ್ಶನ ನೀಡಿದ್ದಾಳೆ.

ಬ್ರಹ್ಮಗಿರಿ ತಪ್ಪಲಿನ ಕಾವೇರಿ ಕ್ಷೇತ್ರದಲ್ಲಿ ಭಕ್ತರ ಹರ್ಷೋದ್ಘಾರದ ನಡುವೆ ತೀರ್ಥ ಸ್ವರೂಪಿಣಿಯಾದ ಕಾವೇರಿ ಮಾತೆಯ ತೀರ್ಥೋದ್ಭವಾಗಿದ್ದು, ಸಾವಿರಾರು ಭಕ್ತರು ಈ ಕ್ಷಣವನ್ನು ಕಣ್ತುಂಬಿಕೊಂಡಿದ್ದಾರೆ. ಪ್ರಧಾನ ಅರ್ಚಕ ಪ್ರಶಾಂತ್ ಆಚಾರ್ ನೇತೃತ್ವದಲ್ಲಿ ಅರ್ಚಕ ಸಮೂಹದಿಂದ ಕಾವೇರಿ ಮಾತೆಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಗಿದೆ.

ತೀರ್ಥೋದ್ಭವಾಗುತ್ತಿದ್ದಂತೆ ಅರ್ಚಕರು ನೆರೆದಿದ್ದ ಭಕ್ತರ ಮೇಲೆ ತೀರ್ಥ ಸಿಂಪಡಣೆ ಮಾಡಿದ್ದಾರೆ. ಸಾಂಪ್ರದಾಯಿಕ ಧಿರಿಸಿನಲ್ಲಿ ಕೊಡವರು ಸಹಸ್ರಾರು ಸಂಖ್ಯೆಯಲ್ಲಿ ಕಾವೇರಿ ಕ್ಷೇತ್ರದಲ್ಲಿ ಸೇರಿದ್ದು, ಕಾವೇರಿ ತೀರ್ಥೋದ್ಭವ ಕ್ಷಣವನ್ನು ಕಣ್ತುಂಬಿಕೊಂಡಿದ್ದಾರೆ. ಇನ್ನು ಈ ಬಾರಿ ನೆರೆದಿರುವ ಸಾವಿರಾರು ಭಕ್ತರಿಗೆ ದೇವಾಲಯದ ನನ್ನ ಪ್ರಸಾದ ಸಭಾಭವನದಲ್ಲಿ ಕೊಡಗು ಏಕೀಕರಣ ರಂಗದ ವತಿಯಿಂದ ಉಪಹಾರ ವಿತರಣೆ ಮಾಡಲಾಗಿದೆ. ಇನ್ನು ಒಂದು ತಿಂಗಳ ಕಾಲ ಕಾವೇರಿ ತುಲಾ ಸಂಕ್ರಮಣ ಜಾತ್ರೆಗೆ ನಡೆಯಲಿದ್ದು, ಸಕಲ ಸಿದ್ಧತೆಗಳು ಪೂರ್ಣಗೊಂಡಿದೆ.

ಕಾವೇರಿ ತೀರ್ಥೋದ್ಭವ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು, ಸ್ಥಳೀಯ ಶಾಸಕರಾದ ಎ.ಎಸ್ ಪೊನ್ನಣ್ಣ, ಡಾ.ಮಂತರ್ ಗೌಡ, ಸುಜಾಕುಶಾಲಪ್ಪ, ಸರ್ಕಾರದ ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಅಧ್ಯಕ್ಷ ಧರ್ಮಜಾ ಉತ್ತಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಎಎಸ್‌ಪಿ ಸುಂದರ್ ರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವರ್ಯ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ಕಾವೇರಿ ತೀರ್ಥೋದ್ಭವ ಕಣ್ಣು ತುಂಬಿಕೊಳ್ಳಲು ನೂರಾರು ಭಕ್ತರು ಪಾದಯಾತ್ರೆಯಲ್ಲಿ ಬರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ತೊಡಿಕಾನ ಶ್ರೀಮಲ್ಲಿಕಾರ್ಜುನ ದೇವಸ್ಥಾನದಿಂದಲೂ ಭಕ್ತರು ಬಂದಿದ್ದಾರೆ. ತೊಡಿಕಾನವು ತಲಕಾವೇರಿಯಿಂದ ಒಂಬತ್ತು ಕಿ.ಮೀ ದೂರದಲ್ಲಿದ್ದು ಸಂಪರ್ಕಿಸುವ ರಸ್ತೆಯು ಅರಣ್ಯ ಪ್ರದೇಶದಲ್ಲಿ ಹಾದು ಹೋಗುತ್ತದೆ.

ತಲಕಾವೇರಿ ತೀರ್ಥೋದ್ಭವ ಸಂದರ್ಭದಲ್ಲಿ ಕಾವೇರಿ ತೀರ್ಥವನ್ನು ತೊಡಿಕಾನ ದೇವಸ್ಥಾನಕ್ಕಾಗಿ ಮೊದಲು ತೆಗೆದಿಡಲಾಗುತ್ತದೆ. ಈ ತೀರ್ಥವನ್ನು ಕೊಂಡೊಯ್ಯಲು ಹಿಂದಿನ ಕಾಲದಲ್ಲಿ ಅರ್ಚಕರು ತಲಕಾವೇರಿಗೆ ಕಾಲ್ನಡಿಗೆಯಲ್ಲಿಯೇ ಬರುತ್ತಿದ್ದರಂತೆ ಆದರೆ ಈಗ ವಾಹನಗಳಲ್ಲಿ ತೊಡಿಕಾನ-ಪಟ್ಟಿ-ಭಾಗಮಂಡಲ ರಸ್ತೆಯಲ್ಲಿ ಬಂದು ಕಾವೇರಿ ತೀರ್ಥ ಕೊಂಡೊಯ್ದು ತೊಡಿಕಾನ ಶ್ರೀಮಲ್ಲಿಕಾರ್ಜುನ ದೇವರಿಗೆ ಅಭಿಷೇಕ ಮಾಡಲಾಗುತ್ತದೆ.

Leave a Reply

Your email address will not be published. Required fields are marked *