ಹೆಚ್‌.ಡಿ ಕೋಟೆಯಲ್ಲಿ ಭಾರೀ ಗಾತ್ರದ ಚಿರತೆಯನ್ನ ಸೆರೆ ಹಿಡಿದ ಅರಣ್ಯ ಅಧಿಕಾರಿಗಳು

ಪರಿವರ್ತನ್ ಪ್ರಭ:

ಮೈಸೂರು ಜಿಲ್ಲೆಯ ಹೆಚ್‌.ಡಿ ಕೋಟೆ ಪಟ್ಟಣದ ಸಮೀಪ ಇರುವ ಗುರುಮಲ್ಲು ಅವರಿಗೆ ಸೇರಿದ ಜಮೀನಿನ ಬಳಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ 7 ವರ್ಷದ ಭಾರೀ ಗಾತ್ರದ ಗಂಡು ಚಿರತೆಯೊಂದು ಸೆರೆ ಸಿಕ್ಕಿದೆ. ಹೆಚ್‌.ಡಿ ಕೋಟೆ ಪಟ್ಟಣದ ಹೌಸಿಂಗ್ ಬೋರ್ಡ್‌ಗೆ ಹೊಂದಿಕೊಂಡಂತೆ ಇರುವ ಜಮೀನಿನ ರೈತರಾದ ದಶರಥ, ವಿವೇಕ, ಗುರುಮಲ್ಲು,ಸಣ್ಣಪ್ಪ, ಸೋಮಣ್ಣ,ಸಣ್ಣಯ್ಯರ ಜಮೀನುಗಳಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಚಿರತೆಗಳ ಹಾವಳಿ ಹೆಚ್ಚಾಗುತ್ತಲೇ ಇತ್ತು. ಈ ಚಿರತೆಗಳು ಈ ಭಾಗದ ರೈತರ ಹಸು, ಕರು ಮೇಕೆ ನಾಯಿಗಳನ್ನು ತಿಂದು ಹಾಕುತ್ತಿದ್ದವು.

ಚಿರತೆ ಹಾವಳಿಯಿಂದ ರೈತರು ರಾತ್ರಿ ಸಮಯದಲ್ಲಿ ಜಮೀನುಗಳಲ್ಲಿ ನೀರು ಹರಿಸಲು ಬರಲು ಭಯಪಡುತ್ತಿದ್ದರು. ಹೀಗಾಗಿ ಬೆಳೆಗಳು ಹಾಳಾಗುತ್ತಿದ್ದು, ಸ್ಥಳೀಯರು ಕೂಡಲೇ ಹೆಚ್.ಡಿ ಕೋಟೆ ಅರಣ್ಯ ಇಲಾಖೆಯ ಆರ್.ಎಫ್ ಪೂಜಾ ಅವರಿಗೆ ದೂರು ನೀಡಿದರು.
ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಈ ಜಮೀನಿನಲ್ಲಿ ಬೋನು ಇರಿಸಿದ್ದರು. ಕಳೆದ ರಾತ್ರಿ ಸ್ಥಳೀಯರು ಹಾಗೂ ಅಧಿಕಾರಿಗಳ ಪ್ರಯತ್ನ ಫಲ ಕೊಟ್ಟಿದ್ದು, ಬೋನಿನಲ್ಲಿ ಇರಿಸಿದ್ದ ನಾಯಿಯನ್ನು ತಿನ್ನಲು ಬಂದು ಭಾರೀ ಗಾತ್ರದ ಏಳು ವರ್ಷದ ಗಂಡು ಚಿರತೆ ಬೋನಿಗೆ ಬಿದ್ದಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಈ ಹಿಂದೆ ಹದಿನೈದು ದಿನಗಳ ಹಿಂದೆ ಎರಡು ಗಂಡು ಚಿರತೆ ಸೆರೆಯಾಗಿದ್ದವು. ಆದರೂ ಮತ್ತೆ ಈ ಭಾಗದ ಜಮೀನುಗಳಲ್ಲಿ ಮತ್ತು ಮನೆಗಳ ಸಮೀಪ ಚಿರತೆಗಳು ಓಡಾಡುತ್ತಿರುವುದು ರೈತರಿಗೆ ಭಯ ಹುಟ್ಟಿಸಿತ್ತು.
ಆಗ ಇಲ್ಲಿನ ರೈತ ದಶರಥ ಬೇರೆ ಜಮೀನಿನಲ್ಲಿ ಇರಿಸಿದ್ದ ಬೋನನ್ನು ಸ್ವತಃ ತಾವೇ ಜಮೀನಿಗೆ ತಂದಿದ್ದರು. ಮತ್ತೊಬ್ಬ ರೈತ ಸಣ್ಣಯ್ಯ ಪ್ರತಿ ದಿನ ಬೋನಿನಲ್ಲಿ ನಾಯಿಯನ್ನು ಕಟ್ಟಿ ಹಾಕುತ್ತಿದ್ದರು. ಅಂತೂ ಇಂತೂ ಕಳೆದ ರಾತ್ರಿ ಚಿರತೆ ಬೋನಿಗೆ ಸೆರೆಯಾಗಿದೆ. ಚಿರತೆ ಸೆರೆಯಾಗುತ್ತಿದಂತೆ ಜೊತೆಯಲ್ಲಿದ್ದ ಚಿರತೆ ಮತ್ತು ಮರಿಗಳು ಬೋನಿನ ಸುತ್ತ ಸುತ್ತಾಡಿ ಬೋನಿನ ಮೇಲೆ ಹಾಕಿದ್ದ ಹುಲ್ಲನ್ನು ಎಳೆದು ಹಾಕಿವೆ ಎನ್ನಲಾಗಿದೆ.

ಚಿರತೆ ಬೋನಿಗೆ ಬಿದ್ದ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳಿಗೆ ಈ ಭಾಗದಲ್ಲಿ ಮೂರ್ನಾಲ್ಕು ಚಿರತೆಗಳಿದ್ದು ಮತ್ತೆ ಬೋನನ್ನು ತಂದು ಜಮೀನಿನಲ್ಲಿ ಇರಿಸುವಂತೆ ಸ್ಥಳೀಯರು ಮನವಿ ಮಾಡಿದರು. ಇನ್ನು ಭಾರೀ ಗಾತ್ರದ ಚಿರತೆ ಬೋನಿಗೆ ಬಿದ್ದ ವಿಚಾರ ತಿಳಿದು ಚಿರತೆಯನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು.

ಈ ಬಗ್ಗೆ ವಲಯ ಅರಣ್ಯಾಧಿಕಾರಿ ಪೂಜಾ ಮಾತನಾಡಿ, ವೈದ್ಯರು ಚಿರತೆಯ ಆರೋಗ್ಯ ಪರೀಕ್ಷಿಸಿದ ನಂತರ ಕಾಡಿಗೆ ಬಿಡಲಾಗುವುದು ಎಂದರು. ಈ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ಪರಮೇಶ್ ಮತ್ತು ಚಿರತೆ ಕ್ಷಿಪ್ರ ರಕ್ಷಣಾ ಪಡೆ ಸಿಬ್ಬಂದಿ ಹಾಜರಿದ್ದರು.

Leave a Reply

Your email address will not be published. Required fields are marked *