ಕಣಿವೆ ರಾಜ್ಯದ ರಾಜಕೀಯದಲ್ಲಿ ಅಚ್ಚರಿ ಮೂಡಿಸಿದ ಕಾಂಗ್ರೆಸ್‌ ನಡೆ!

ಪರಿವರ್ತನ್ ಪ್ರಭ:

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ 2024ರ ಫಲಿತಾಂಶ ಘೋಷಣೆಯಾಗಿದೆ. ನ್ಯಾಷನಲ್ ಕಾನ್ಪರೆನ್ಸ್ ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಮುಖ್ಯಮಂತ್ರಿಯಾಗಿ ಬುಧವಾರ ಬೆಳಗ್ಗೆ 11.30ಕ್ಕೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇಂತಹ ಸಮಯದಲ್ಲಿಯೇ ಕಾಂಗ್ರೆಸ್ ಪಕ್ಷ ಕಣಿವೆ ರಾಜ್ಯದ ರಾಜಕೀಯಕ್ಕೆ ತಿರುವು ನೀಡಿದೆ.

ಕಾಂಗ್ರೆಸ್ ತೀರ್ಮಾನದಿಂದ ನ್ಯಾಷನಲ್ ಕಾನ್ಪರೆನ್ಸ್-ಕಾಂಗ್ರೆಸ್‌ ಮೈತ್ರಿ ಮುರಿದು ಬೀಳಲಿದೆಯೇ? ಎಂಬ ಪ್ರಶ್ನೆ ಎದ್ದಿದೆ.
ವಿಧಾನಸಭೆ ಚುನಾವಣೆಯಲ್ಲಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ನ್ಯಾಷನಲ್ ಕಾನ್ಪರೆನ್ಸ್‌ಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ. ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಜಮ್ಮ ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಎಂದು ಘೋಷಣೆ ಮಾಡಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ಭೇಟಿಯಾಗಿ ಸರ್ಕಾರ ರಚನೆ ಹಕ್ಕು ಮಂಡಿಸಲಾಗಿದೆ.

ಒಟ್ಟು 90 ಸದಸ್ಯ ಬಲದ ವಿಧಾನಸಭೆಯಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 46. ಚುನಾವಣೆಯಲ್ಲಿ ನ್ಯಾಷನಲ್ ಕಾನ್ಪರೆನ್ಸ್ 42 ಸ್ಥಾನಗಳಲ್ಲಿ ಜಯಗಳಿಸಿದೆ. ಕಾಂಗ್ರೆಸ್ 6, ಬಿಜೆಪಿ 29, ಪಿಡಿಪಿ 3, ಜೆಪಿಸಿ 1 ಮತ್ತು ಇತರರು 7 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಪರೆನ್ಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದು, ನಾಲ್ವರು ಪಕ್ಷೇತರರು ಸಹ ನ್ಯಾಷನಲ್ ಕಾನ್ಪರೆನ್ಸ್ ಬೆಂಬಲಿಸಿದ್ದಾರೆ.

ಕಾಂಗ್ರೆಸ್ ಅಚ್ಚರಿಯ ನಡೆ: ನ್ಯಾಷನಲ್ ಕಾನ್ಪರೆನ್ಸ್ 42, ಕಾಂಗ್ರೆಸ್ 6 ಮತ್ತು ನಾಲ್ವರು ಪಕ್ಷೇತರರು ಸೇರಿರುವ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಪ್ರಮಾಣ ವಚನ ಸಮಾರಂಭಕ್ಕೂ ಮೊದಲು ಕಾಂಗ್ರೆಸ್‌ ಅಚ್ಚರಿಯ ತೀರ್ಮಾನ ಕೈಗೊಂಡಿದೆ. ಕಾಂಗ್ರೆಸ್ ಪಕ್ಷದ ಮೂಲಗಳ ಮಾಹಿತಿ ಪ್ರಕಾರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸರ್ಕಾರದ ಭಾಗವಾಗಿ ಕಾಂಗ್ರೆಸ್ ಇರುವುದಿಲ್ಲ, ಸರ್ಕಾರಕ್ಕೆ ಕೇವಲ ಬಾಹ್ಯ ಬೆಂಬಲ ನೀಡಲಿದೆ.

ಚುನಾವಣಾ ಪೂರ್ವದಲ್ಲಿಯೇ ನ್ಯಾಷನಲ್ ಕಾನ್ಪರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದವು. ಸೀಟು ಹಂಚಿಕೆಯಂತೆ ನ್ಯಾಷನಲ್ ಕಾನ್ಪರೆನ್ಸ್ 51, ಕಾಂಗ್ರೆಸ್ 32 ಸೀಟುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ನ್ಯಾಷನಲ್ ಕಾನ್ಪರೆನ್ಸ್‌ ಏಕಾಂಗಿಯಾಗಿ ಮ್ಯಾಜಿಕ್ ನಂಬರ್ ತಲುಪಲು 4 ಸ್ಥಾನದ ಕೊರತೆ ಎದುರಾಗಿತ್ತು. ಆದರೆ ಮೈತ್ರಿಕೂಟದ ಕಾರಣ ನ್ಯಾಷನಲ್ ಕಾನ್ಪರೆನ್ಸ್, ಕಾಂಗ್ರೆಸ್ ಸೇರಿ ಸರ್ಕಾರ ರಚಿಸಲಿದೆ ಎಂದು ಅಂದಾಜಿಸಲಾಗಿತ್ತು.

Leave a Reply

Your email address will not be published. Required fields are marked *