ಹೆಸರಿಗಷ್ಟೇ ಇವೆಂಟ್ ಮ್ಯಾನೇಜ್ ಮೆಂಟ್, ಆದ್ರೆ ನಡೀತಿದ್ದದ್ದು ಮಾತ್ರ ಬರೀ ಸೆಟಲ್ಮೆಂಟ್!


ಪರಿವರ್ತನ ಪ್ರಭಾ:
ಬೆಂಗಳೂರಿನ ಈವೆಂಟ್‌ ಮ್ಯಾನೇಜ್‌ಮೆಂಟ್‌ವೊಂದರ ಜಾಡು ಹಿಡಿದ್ದ ಸಿಸಿಬಿ ಪೊಲೀಸರಿಂದ ಬೆಚ್ಚಿಬೀಳಿಸುವ ವಿಚಾರವೊಂದು ಬಹಿರಂಗವಾಗಿದೆ. ಈವೆಂಟ್ ಮ್ಯಾನೇಜ್‌ಮೆಂಟ್ ಹೆಸರಲ್ಲಿ ಮಾಡಬಾರದ ಕೆಲಸ ಮಾಡುತ್ತಿದ್ದ ದಂಪತಿ ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ.

ಹೆಸರಿಗೆ ಮಾತ್ರ ಅದು ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ಎನಿಸಿಕೊಂಡಿತ್ತು. ಆದರೆ ಅಲ್ಲಿ ನಡೆಯುತ್ತಿದ್ದು ಹೈಟೆಕ್ ವೇಶ್ಯಾವಾಟಿಕೆ ದಂಧೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇವರು ಕೇವಲ ತಮ್ಮ ದಂಧೆಯ ಹೆಸರನ್ನು ಮಾತ್ರ ಬದಲಿಸಿರಲಿಲ್ಲ. ಖತರ್ನಾಕ್‌ ದಂಪತಿ ಕೊನೆಗೆ ತಮ್ಮ ಹೆಸರನ್ನೇ ಬದಲಿಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದರು ಎನ್ನಲಾಗಿದೆ.
ಸಿಲಿಕಾನ್‌ ಸಿಟಿಯ ಪಟ್ಟೆಗಾರಪಾಳ್ಯದಲ್ಲಿ ನೆಲೆಸಿದ್ದ ಪ್ರಕಾಶ್ ಹಾಗೂ ಪಾರಿಜಾತ ದಂಪತಿ ರಾಕೇಶ್ ಹಾಗೂ ಪೂಜಾ ಹೆಸರಲ್ಲಿ ದಂಧೆ ನಡೆಸುತ್ತಿದ್ದರಂತೆ. ಯುವತಿಯರ ನಿರುದ್ಯೋಗ ಸಮಸ್ಯೆಯನ್ನು ಬಂಡವಾಳ ಮಾಡಿಕೊಂಡಿದ್ದ ಈ ಕಿರಾತಕ ದಂಪತಿ, ಕರ್ನಾಟಕದ ಅದರಲ್ಲೂ ಉತ್ತರ ಕರ್ನಾಟಕ ಬಡ ಯುವತಿಯರನ್ನು ಟಾರ್ಗೆಟ್‌ ಮಾಡುತ್ತಿದ್ದರು ಎಂದು ವರದಿಯಾಗಿದೆ.

ಕೆಲಸ ಕೊಡಿಸುವುದಾಗಿ ಬಡ ಯುವತಿಯರಿಗೆ ನಂಬಿಸಿ, ಬೆಂಗಳೂರಿಗೆ ಕರೆಸಿಕೊಳ್ಳುತ್ತಿದ್ದ ಈ ಐನಾತಿಗಳು ಬಳಿಕ ಅವರನ್ನು ಹೊರರಾಜ್ಯಗಳಲ್ಲಿ ವೇಶ್ಯಾವಾಟಿಕೆಗೆ ದೂಡುತ್ತಿದ್ದರು. ಇದೇ ದಂಧೆಯಲ್ಲಿ ಬೇರೆ ರಾಜ್ಯಗಳ ಶ್ರೀಮಂತರು, ಕಾಲೇಜು ಯುವಕರು, ಉದ್ಯಮಿಗಳಿಗೆ ಇಲ್ಲಿಂದ ಯುವತಿಯರನ್ನು ಕಳಿಸಿಕೊಟ್ಟು ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದರು ಎಂದು ತಿಳಿದುಬಂದಿದೆ.

ಯಾರಿಗೂ ಅನುಮಾನ ಬರಬಾರದು ಎಂದು ಯುವತಿಯರನ್ನು ಈವೆಂಟ್‌ ಮ್ಯಾನೇಜ್‌ಮೆಂಟ್‌ ಹೆಸರಿನಲ್ಲಿ ವಾರಕ್ಕೊಮ್ಮೆ ಬೆಂಗಳೂರಿನಿಂದ ತಮಿಳುನಾಡಿದ ಪಾಂಡಿಚೆರಿ ಸೇರಿದಂತೆ ಹಲವು ರೆಸಾರ್ಟ್‌ಗಳಿಗೆ ಕರೆದೊಯ್ದು ದಂಧೆ ನಡೆಸುತ್ತಿದ್ದರು. ಅಲ್ಲಿ ಇವರೇ ಪಾರ್ಟಿಗಳನ್ನು ಆಯೋಜಿಸಿ, ಅಲ್ಲಿಗೆ ಬರುತ್ತಿದ್ದ ಕಸ್ಟಮರ್‌ಗಳಿಂದ ಬರೋಬ್ಬರಿ 50 ಸಾವಿರ ರೂಪಾಯಿವರೆಗೆ ರೇಟ್‌ ಫಿಕ್ಸ್‌ ಮಾಡಿ, ಯುವತಿಯರನ್ನು ಕಳಿಸಿಕೊಡುತ್ತಿದ್ದರು ಎಂದು ಹೇಳಲಾಗಿದೆ.

ಇವರ ಕೃತ್ಯಕ್ಕೆ ಹೆಚ್ಚಾಗಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಬಡ ಯುವತಿಯರೇ ಬಲಿಪಶು ಆಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಿಸಿಬಿ ಪೊಲೀಸರಿಗೆ ಸುಳಿವು ಸಿಕ್ಕಿದ್ದರಿಂದ ಇವರ ನಕಲಿ ಈವೆಂಟ್‌ ಮ್ಯಾನೇಜ್‌ಮೆಂಟ್‌ನ ಬೆನ್ನುಹತ್ತಿದ್ದರು. ಅವರ ಪ್ಲ್ಯಾನ್‌ನಂತೆ ಯುವತಿಯರನ್ನು ಬೆಂಗಳೂರಿನಿಂದ ತಮಿಳುನಾಡಿಗೆ ಕರೆದೊಯ್ಯುತ್ತಿದ್ದಾಗ ದಾಳಿ ನಡೆಸಿದ್ದರು. ಈ ವೇಳೆ ನಾಲ್ವರು ಸಂತ್ರಸ್ತ ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ.

ಬಳಿಕ ದಂಪತಿಯನ್ನು ಬಂಧಿಸಿ, ಫುಲ್‌ ಚಾರ್ಜ್‌ ಶುರು ಮಾಡಿದ್ದಾರಂತೆ. ವಿಚಾರಣೆ ವೇಳೆ ಆರೋಪಿ ದಂಪತಿಯ ಈವೆಂಟ್‌ ಮ್ಯಾನೇಜ್‌ಮೆಂಟ್‌ ಗುಟ್ಟು ರಟ್ಟಾಗಿದೆ. ಅಲ್ಲದೆ ಅವರ ಅಸಲಿ ಹೆಸರುಗಳು ಕೂಡ ಬಾಯಿಂದ ಬಂದಿದೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಇದೇ ರೀತಿ ಈವೆಂಟ್‌ ಮ್ಯಾನೇಜ್‌ಮೆಂಟ್‌ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುವ ದೊಡ್ಡ ಜಾಲ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಶೀಘ್ರವೇ ಕಾರ್ಯಾಚರಣೆ ನಡೆಸಲು ಪೊಲೀಸರು ಸಜ್ಜಾಗಿದ್ದಾರೆ ಎನ್ನಲಾಗಿದೆ.

ಉದ್ಯೋಗದ ಆಸೆಗೆ ಬೆಂಗಳೂರಿಗೆ ಬರುತ್ತಿದ್ದ ಬಡ ಯುವತಿಯರಿಗೆ ಈ ದಂಪತಿ ಬಲೆಬೀಸುತ್ತಿದ್ದರು. ಮೊದಲಿಗೆ ಈವೆಂಟ್‌ ಮ್ಯಾನೇಜ್‌ಮೆಂಟ್‌ ಕೆಲಸ ಎಂದು ಹೇಳಿ ರೆಸಾರ್ಟ್‌ಗೆ ಕರೆದೊಯ್ದು, ಅಲ್ಲಿ ಗೆಸ್ಟ್‌ಗಳಿಗೆ ಜ್ಯೂಸ್‌, ಎಣ್ಣೆ, ಊಟ ಸೇರಿದಂತೆ ಹಲವು ಆತಿಥ್ಯ ಇವರಿಂದಲೇ ಕೊಡಿಸುತ್ತಿದ್ದರು. ಕೊನೆಗೆ ರಾತ್ರಿಯಾದ ವೇಳೆ ಅವರೊಂದಿಗೆ ಮಂಚಕ್ಕೆ ಕಳಿಸುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.

Leave a Reply

Your email address will not be published. Required fields are marked *