ಪರಿವರ್ತನ ಪ್ರಭಾ:
ರಾಜ್ಯ ಕಾಂಗ್ರೆಸ್‌ನಲ್ಲಿ ಸರ್ಕಾರ ಉರುಳುವುದು, ಸಿಎಂ ಬದಲಾವಣೆ ವಿಚಾರಗಳೇ ಪ್ರತಿಧ್ವನಿಸುತ್ತಿವೆ. ಇದೇ ವಿಚಾರವಾಗಿ ಕಾಂಗ್ರೆಸ್ ಸರ್ಕಾರವನ್ನು ಜೆಡಿಎಸ್ ಹಾಗು ಬಿಜೆಪಿ ಪಕ್ಷಗಳು ಲೇವಡಿ ಕೂಡ ಮಾಡುತ್ತಿವೆ.
ಕಳೆದ ವಾರದಿಂದಲೂ ಇದೇ ವಿಚಾರವಾಗಿ ಎರಡೂ ಪಕ್ಷಗಳ ನಡುವೆ ವಾರ್ ಶುರುವಾಗಿದ್ದು, ಕೆಸರೆರಚಾಟ ಕೂಡ ನಡೆಯುತ್ತಿದೆ.
ಇಂದು ಜೆಡಿಎಸ್ ಮತ್ತೆ ಕಾಂಗ್ರೆಸ್ ವಿರುದ್ಧ ಟ್ವೀಟ್‌ನಲ್ಲಿ ಕೆಂಡಕಾರಿದೆ. ಕುರ್ಚಿ ಕನಸಿಗೆ ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ. ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಹಗರಣಗಳ ಸುಳಿಯಲ್ಲಿ ಸಿಲುಕಿ ರಾಜ್ಯದ ಅಭಿವೃದ್ಧಿಯನ್ನು ಪಾತಳಕ್ಕೆ ಇಳಿಸಿಬಿಟ್ಟಿದೆ ಎಂದು ವ್ಯಂಗ್ಯವಾಡಿದೆ.
ರಾಜಧಾನಿ ಬೆಂಗಳೂರಿನ ರಸ್ತೆಗಳ ಗುಂಡಿಗಳು ರಾಜ್ಯ ಸರ್ಕಾರದ ಹದಗೆಟ್ಟ ಆಡಳಿತಕ್ಕೆ ಕನ್ನಡಿ ಹಿಡಿದಂತಿದೆ. ರಾಜ್ಯದಲ್ಲಿ ನೆರೆಹಾನಿಯಿಂದ ಸಂಕಷ್ಟಕ್ಕೊಳಗಾದವರಿಗೆ ಇಲ್ಲಿಯವರೆಗೂ ಪುನರ್ ಜೀವನ ಕಟ್ಟಿಕೊಡುವಲ್ಲಿ ಸಿದ್ದರಾಮಯ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದೆ.
ದೀರ್ಘವಾಧಿ ಯೋಜನೆಗಳ ಅನುಷ್ಠಾನ ಮರೀಚಿಕೆಯಾಗಿದ್ದು, ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರಗಳಲ್ಲಿ ತೊಡಗಿ ಪ್ರತಿನಿತ್ಯ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಮುಡಾ ಹಗರಣದಲ್ಲಿ ಎ1 ಆರೋಪಿಯಾಗಿರುವ ಸಿದ್ದರಾಮಯ್ಯ ಅವರು ಕುರ್ಚಿ ಉಳಿಸಿಕೊಳ್ಳುವುದರಲ್ಲೇ ಮಗ್ನರಾಗಿದ್ದಾರೆ ಎಂದು ಟೀಕಿಸಿದೆ.
ಇತ್ತ ತೆರವಾಗಲಿರುವ ಸಿಎಂ ಕುರ್ಚಿಗೆ ಟವೆಲ್ ಹಾಕಲು ಡೆಲ್ಲಿಯಾತ್ರೆ ಮಾಡುತ್ತಿರುವ ಆಕ್ಷಾಂಕ್ಷಿಗಳು, ರಹಸ್ಯ ಸಭೆಗಳನ್ನು ಮಾಡುತ್ತಾ ಅಧಿಕಾರಕ್ಕಾಗಿ ಹವಣಿಸುತ್ತಿದ್ದಾರೆ. ವಿರೋಧ ಪಕ್ಷಗಳ ನಾಯಕರ ವಿರುದ್ಧ ಮಾಡುತ್ತಿರುವ ಸೇಡಿನ ರಾಜಕಾರಣವನ್ನೇ ಸಾಧನೆ ಎಂದು ಬಿಂಬಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ನಾಡಿನ ಜನರೇ ತಕ್ಕ ಪಾಠ ಕಲಿಸುವುದು ಗ್ಯಾರಂಟಿ ಎಂದು ವಾಗ್ದಾಳಿ ನಡೆಸಿದೆ.
ನಿನ್ನೆಯೂ ಟ್ವೀಟ್ ವಾರ್ ಶುರು ಮಾಡಿದ್ದ ಜೆಡಿಎಸ್, 'ಕಲೆಕ್ಷನ್ ಅಧ್ಯಕ್ಷನ ಪರ್ಸಂಟೇಜ್ ಪುರಾಣ ಎಂದು ಶೀರ್ಷಿಕೆ ನೀಡಿ ವಾಗ್ದಾಳಿ ನಡೆಸಿತ್ತು. ಪರ್ಸೆಂಟೇಜ್ ಗಿರಾಕಿ ಎಂದು ಸ್ವತಃ ಕಾಂಗ್ರೆಸ್ ವಕ್ತಾರರೇ, ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ನ ರೋಲ್ ಕಾಲ್ ಪುರಾಣ ಬಿಚ್ಚಿಟ್ಟಿದ್ದಾರೆ. ಬೆಂಗಳೂರಿನಲ್ಲಿ 15 ದಿನಗಳ ಕಾಲ ತೇಪೆ ಹಚ್ಚಿದ ರಸ್ತೆ ಗುಂಡಿಗಳು ಒಂದೇ ರಾತ್ರಿ ಸುರಿದ ಮಳೆಗೆ ಕೊಚ್ಚಿಹೋಗಿದೆ ಎಂದು ಆರೋಪ ಮಾಡಿತ್ತು.
ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಮೇಯುತ್ತಿರುವ "ಕಲೆಕ್ಷನ್ ಗಿರಾಕಿ"ಯ ಪರ್ಸಂಟೇಜ್ ಅವ್ಯವಹಾರಕ್ಕೆ ಮತ್ತು ಕಳಪೆ ಕಾಮಗಾರಿಗೆ ಪ್ರತ್ಯಕ್ಷ ಸಾಕ್ಷಿ! ಅಂದ್ಹಾಗೆ, ಕಿತ್ತುಹೋಗಿರುವ ರಸ್ತೆ ಗುಂಡಿಗಳನ್ನು ವೀಕ್ಷಿಸಲು ಗುಂಡುಹಾಕಿ ಸಿಟಿ ನೈಟ್ ರೌಂಡ್ಸ್ ಯಾವಾಗ ಮಾಡ್ತೀರಾ..? ಎಂದು ಕೆಣಕಿತ್ತು.
ಬಳಿಕ ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿದ್ದ ಕಾಂಗ್ರೆಸ್, ʼಕುಮಾರಸ್ವಾಮಿ ಅವರ ಪುರಾಣವನ್ನು ಜನತಾ ದಳ ಪಕ್ಷದವರೇ ಬಿಚ್ಚಿಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿದೆಯೇ?' ಎಂದು ಪ್ರಶ್ನಿಸಿತ್ತು.
ಹಿಟ್ ಅಂಡ್ ರನ್ ಜಾಯಮಾನ ನಿಮ್ಮದು. ನಿಮ್ಮ ಜೀವನದಲ್ಲಿ ಡಿ.ಕೆ.ಶಿವಕುಮಾರ್ ಅವರ ಮೇಲೆ ಮಾಡಿರುವ ಹಲವು ಆರೋಪಗಳ ಪೈಕಿ ಒಂದಕ್ಕಾದರೂ ಪೂರಕ ದಾಖಲೆ ಒದಗಿಸಿದ್ದೀರಾ? ಸ್ವತಃ ಡಿ.ಕೆ. ಶಿವಕುಮಾರ್ ಅವರು ನೀವು ಮಾಡಿರುವ ಆರೋಪಗಳನ್ನು ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ಮಾಡಲು ಆಹ್ವಾನಿಸಿದ್ದಾರೆ. ಆ ಮೂಲಕ ತಮ್ಮ ಪೌರುಷವನ್ನು ಸಾಬೀತುಪಡಿಸಿದ್ದಾರೆ ಎಂದು ಹೇಳಿತ್ತು.
Post Views: 17