ಗ್ಲೋಬಲ್ ಬೇಬಿ ಜೀನಿಯಸ್ ಅವಾರ್ಡ್ 2024 ಪ್ರಶಸ್ತಿ ಪಡೆದ ಚಿಕ್ಕಮಗಳೂರಿನ ಮನಸ್ಮಿತಾ

ಪರಿವರ್ತನ ಪ್ರಭಾ:
ಚಿಕ್ಕಮಗಳೂರು ಜಿಲ್ಲೆಯ ಮಳಲೂರಿನ ಕಂಬಿಹಳ್ಳಿ ನಿವಾಸಿ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಡಿ.ಎಮ್. ಧನಲಕ್ಷ್ಮಿಕುಮಾರಿ ಮತ್ತು ಹುಲಿಯಪ್ಪಗೌಡ ಅವರ ಮಗಳು ಮನಸ್ಮಿತಾ ಅವರು 2024ರ ಗ್ಲೋಬಲ್ ಬೇಬಿ ಜೀನಿಯಸ್ ಪ್ರಶಸ್ತಿಗೆ (Global Baby Genius Award 2024) ಭಾಜನರಾಗಿದ್ದಾರೆ.

ಯುನೈಟೆಡ್ ಸ್ಟೇಟ್ಸ್​ನ ವಿಲ್ಮಿಂಗ್ಟನ್ನಲ್ಲಿರುವ (Wilmington) ಜೀನಿಯಸ್ ಬೇಬಿ ಅವಾರ್ಡ್ ಸಂಸ್ಥೆಯು ಸೆಪ್ಟೆಂಬರ್ 30ರಂದು ಗ್ಲೋಬಲ್ ಬೇಬಿ ಜೀನಿಯಸ್ 2024 ಸ್ಪರ್ಧೆಯನ್ನು ಆಯೋಜಿಸಿತ್ತು, ಈ ಸ್ಪರ್ಧೆಯು ಅಸಾಧಾರಣ ಆರಂಭಿಕ ಬಾಲ್ಯದ ಸಾಧನೆಗಳನ್ನು ಗುರುತಿಸುತ್ತದೆ.

ಹುಟ್ಟಿನಿಂದ 5 ವರ್ಷದೊಳಗಿನ ಮಕ್ಕಳಿಗಾಗಿ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಪರಿಣಿತ ಪ್ಯಾನೆಲ್‌ಗಳು ನಿರ್ಣಯಿಸಿದಂತೆ ಚುರುಕುತನ, ದೈಹಿಕ ಸಾಮರ್ಥ್ಯ, ಕಂಠಪಾಠ ಕೌಶಲ್ಯಗಳು, ಭಾಷಾ ಬೆಳವಣಿಗೆ ಮತ್ತು ಇತರ ಪ್ರಮುಖ ಬೆಳವಣಿಗೆಯ ಅಂಶಗಳನ್ನು ಆಧರಿಸಿ ಭಾಗವಹಿಸುವವರನ್ನು ಮೌಲ್ಯಮಾಪನ ಮಾಡಲಾಗಿತ್ತು.

ಈ ಸ್ಪರ್ಧೆಯಲ್ಲಿ ಅಗಾಧ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರಪಂಚದಾದ್ಯಂತ 8,34,024 ಮಕ್ಕಳು ಭಾಗವಹಿಸಿದ್ದರು. ಜಾಗತಿಕವಾಗಿ ಫ್ಲಾಶ್ ಕಾರ್ಡ್ ಗುರುತಿಸುವ ಕೌಶಲ್ಯ ವಿಭಾಗದಲ್ಲಿ 35,000 ಮಕ್ಕಳು ಪಾಲ್ಗೊಂಡಿದ್ದರು. ನಂತರ 9,643 ಮಕ್ಕಳು ಅಂತಿಮ ಸುತ್ತಿನಲ್ಲಿ ಭಾಗವಹಿಸಿದ್ದರು. ಈ 9643 ಮಕ್ಕಳಲ್ಲಿ ಮನಸ್ಮಿತಾ ಅವರು ಫ್ಲಾಶ್ ಕಾರ್ಡ್ಗಳನ್ನು ಗುರುತಿಸುವಲ್ಲಿ ಅಸಾಧಾರಣ ಕೌಶಲ್ಯವನ್ನು ಪ್ರದರ್ಶಿಸಿದರು. 60 ನಿಮಿಷದಲ್ಲಿ ಸಾವಿರಕ್ಕಿಂತಲೂ ಅಧಿಕ ಕಾರ್ಡ್​ಗಳನ್ನು ಗುರುತಿಸಿದ್ದಾರೆ.

ತೀಕ್ಷ್ಣವಾದ ಅರಿವಿನ ಸಾಮರ್ಥ್ಯಗಳು ಮತ್ತು ತ್ವರಿತ ಗುರುತಿಸುವಿಕೆಯನ್ನು ಆಧಾರಿಸಿ ಸಂಸ್ಥೆಯು ಮನಸ್ಮಿತಾ ಅವರಿಗೆ 2024ರ ಗ್ಲೋಬಲ್ ಜೀನಿಯಸ್ ಅವಾರ್ಡ್ ನೀಡಿ ಗೌರವಿಸಿದೆ. ಈ ಸ್ಪರ್ಧೆಯನ್ನು ಜಾಗತಿಕವಾಗಿ ಮಕ್ಕಳ ಅಸಾಧಾರಣ ಪ್ರತಿಭೆಗಳು ಮತ್ತು ಬೆಳವಣಿಗೆಯ ಪ್ರಗತಿಯನ್ನು ಆಚರಿಸಲು ಮತ್ತು ಗೌರವಿಸಲು ರಚಿಸಲಾಗಿದ್ದು, ಮನಸ್ಮಿತಾಳ ಆರಂಭಿಕ ಸಾಧನೆಗಳನ್ನು ಗುರುತಿಸಿ ಗ್ಲೋಬಲ್ ಜೀನಿಯಸ್ ಸಂಸ್ಥೆ ಹಾಗೂ ಸಂಸ್ಥೆಯ ಬೋರ್ಡ್ ಮೆಂಬರ್ ಡ್ಯಾನೆಲ್ ಬೂಸ್ ಮತ್ತು ಡೈರೆಕ್ಟರ್ ಮಾನಸ್ ಸಿಂಗ್ ಅವರು ಮನಸ್ಮಿತಾರನ್ನು ಗೌರವಿಸಿ ಅಭಿನಂದಿಸಿದ್ದಾರೆ. ಮಗಳ ಸಾಧನೆ ಕಂಡು ಪೋಷಕರು ಅತೀವ ಸಂತಸಕ್ಕೆ ಒಳಗಾಗಿದ್ದಾರೆ.

Leave a Reply

Your email address will not be published. Required fields are marked *