ಲೋನ್ ಪ್ರೀಪೇಮೆಂಟ್, ಎನ್​ಇಎಫ್​ಟಿ ಪಾವತಿ ಮಾರ್ಗಸೂಚಿಯಲ್ಲಿ ಬದಲಾವಣೆ

ಪರಿವರ್ತನ ಪ್ರಭಾ:
ಮುಂಗಡವಾಗಿ ಸಾಲದ ಕಂತುಗಳನ್ನು ಕಟ್ಟಿದರೆ, ಅಥವಾ ಅವಧಿಗಿಂತ ಮುಂಚಿತವಾಗಿ ಸಾಲ ತೀರಿಸಿದರೆ ದಂಡ ವಿಧಿಸಲಾಗುತ್ತದೆ. ಫ್ಲೋಟಿಂಗ್ ರೇಟ್​ನಲ್ಲಿ ಪಡೆದ ಸಾಲಕ್ಕೆ ಪೆನಾಲ್ಟಿ ಚಾರ್ಜ್​ಗಳಿರುವುದಿಲ್ಲ. ಇದು ಬಿಸಿನಸ್ ಅಲ್ಲದ ಇತರ ವೈಯಕ್ತಿಕ ಗ್ರಾಹಕ ಲೋನ್​ಗಳಿಗೆ ಅನ್ವಯ ಆಗುತ್ತದೆ. ಈಗ ಈ ವಿನಾಯಿತಿ ಸೌಲಭ್ಯವನ್ನು ಸಣ್ಣ ಹಾಗೂ ಕಿರು ಉದ್ದಿಮೆಗಳಿಗೂ ವಿಸ್ತರಿಸಲಾಗಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತದಾಸ್ ಇಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ್ದಾರೆ. ಗ್ರಾಹಕರ ಹಿತಾಸಕ್ತಿಗೆ ಅನುಗುಣವಾಗಿ ರಿಸರ್ವ್ ಬ್ಯಾಂಕ್ ಹಲವು ಕ್ರಮಗಳನ್ನು ಈ ಹಿಂದೆ ತೆಗೆದುಕೊಂಡಿದೆ. ಇದೇ ಹಾದಿಯಲ್ಲಿ ಒಂದಷ್ಟು ಮಾರ್ಗಸೂಚಿಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಫ್ಲೋಟಿಂಗ್ ರೇಟ್ ಎಂದರೆ ಸಾಲದ ಅವಧಿಯಲ್ಲಿ ಬ್ಯಾಂಕಿನ ಬಡ್ಡಿದರ ಬದಲಾದರೆ, ಅದು ಸಾಲಕ್ಕೂ ಅನ್ವಯ ಆಗುತ್ತದೆ. ಫಿಕ್ಸೆಡ್ ರೇಟ್​ನಲ್ಲಿ ಸಾಲ ಪಡೆದಿದ್ದರೆ ಆರಂಭದಿಂದ ಹಿಡಿದು ಕೊನೆಯವರೆಗೂ ಏಕರೀತಿಯ ಬಡ್ಡಿ ಅನ್ವಯ ಆಗುತ್ತದೆ.
ಆರ್​ಟಿಜಿಎಸ್, ಎನ್​ಇಎಫ್​ಟಿಯಲ್ಲಿ ಬೆನಿಫಿಶಿಯರಿ ಹೆಸರು ಪರಿಶೀಲನೆಗೆ ಅವಕಾಶ

ಯುಪಿಐ ಮತ್ತು ಐಎಂಪಿಎಸ್​ನಲ್ಲಿ ನೀವು ಯಾರಿಗಾದರೂ ಹಣ ಕಳುಹಿಸುವಾಗ ಅವರ ಬ್ಯಾಂಕ್ ಖಾತೆಯಲ್ಲಿರುವ ಹೆಸರನ್ನು ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳಬಹುದು. ಆದರೆ, ಆರ್​ಟಿಜಿಎಸ್ ಮತ್ತು ಎನ್​ಇಎಫ್​ಟಿ ಮೂಲಕ ಹಣ ವರ್ಗಾವಣೆ ಮಾಡುವಾಗ ವ್ಯಕ್ತಿಯ ಹೆಸರು ಮತ್ತು ಅಕೌಂಟ್​ ಅನ್ನು ಖಾತ್ರಿಪಡಿಸಿಕೊಳ್ಳುವ ಅವಕಾಶ ಇರಲಿಲ್ಲ. ಇದರಿಂದ ತಪ್ಪಾದ ವ್ಯಕ್ತಿಗೆ ಹಣ ವರ್ಗಾವಣೆ ಆಗಿ ಹೋಗುವ ಸಂಭಾವ್ಯತೆ ಇರುತ್ತದೆ. ಇದನ್ನು ತಪ್ಪಿಸಲು ಈಗ ಆರ್​ಟಿಜಿಎಸ್ ಮತ್ತು ಎನ್​ಇಎಫ್​ಟಿಯಲ್ಲೂ ಹೆಸರು ಪರಿಶೀಲಿಸುವ ಸೌಲಭ್ಯವನ್ನು ತರಲು ಆರ್​ಬಿಐ ನಿರ್ಧರಿಸಿದೆ.
ನೀವು ಹಣ ಪಾವತಿಸುವ ಮುನ್ನ ಬೆನಿಫಿಶಿಯರಿಯ ಹೆಸರನ್ನು ದೃಢಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ತಪ್ಪಾದ ವ್ಯಕ್ತಿಗೆ ಹಣ ವರ್ಗಾವಣೆ ಆಗುವುದು ತಪ್ಪುತ್ತದೆ.

ನೀವು ಆರ್​ಟಿಜಿಎಸ್ ಅಥವಾ ಎನ್​ಇಎಫ್​ಟಿಯಲ್ಲಿ ಹಣ ಪಾವತಿಸುವಾಗ ವ್ಯಕ್ತಿಯ ಅಕೌಂಟ್ ನಂಬರ್ ಮತ್ತು ಐಎಫ್​ಎಸ್​ಸಿ ಕೋಡ್ ಅನ್ನು ನಮೂದಿಸಿದಾಗ, ಬ್ಯಾಂಕ್​ಗೆ ಜೋಡಿತವಾದ ಆ ವ್ಯಕ್ತಿಯ ಹೆಸರು ಕಾಣಿಸುತ್ತದೆ. ಇದರಿಂದ ಸರಿಯಾದ ವ್ಯಕ್ತಿಗೆ ಹಣ ಪಾವತಿ ಆಗುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳಬಹುದು. ಈ ಬಗ್ಗೆ ವಿವರವಾದ ಮಾರ್ಗಸೂಚಿಗಳನ್ನು ಪ್ರತ್ಯೇಕವಾಗಿ ನೀಡಲಾಗುವುದು ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತದಾಸ್ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *