ಸಿದ್ದರಾಮಯ್ಯನವರೇ ವೈಯಕ್ತಿಕ ಪ್ರತಿಷ್ಠೆಗಾಗಿ ರಾಜ್ಯದ ಭವಿಷ್ಯವನ್ನು ಬಲಿ ಕೊಡಬೇಡಿ ಎಂದ ವಿರೋಧ ಪಕ್ಷದ ನಾಯಕ ಆರ್. ಅಶೋಕ

ಪರಿವರ್ತನ್ ಪ್ರಭ:

15 ಬಜೆಟ್ ಮಂಡಿಸಿರುವ ಸ್ವಯಂಘೋಷಿತ ಆರ್ಥಿಕ ತಜ್ಞರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರೂ ಸಂಪನ್ಮೂಲ ಸಂಗ್ರಹಣೆಯಲ್ಲಿ ಶೇ.4% ರಷ್ಟು ಹಿನ್ನಡೆಯಗಿದ್ದು, ಕಾಂಗ್ರೆಸ್​ ಸರ್ಕಾರ ಬಂದಾಗಿನಿಂದ ಕುಸಿಯುತ್ತಿರುವ ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಕನ್ನಡಿ ಹಿಡಿದಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಿಪಕ್ಷ ನಾಯಕ ಆರ್​. ಅಶೋಕ ವಾಗ್ದಾಳಿ ನಡೆಸಿದ್ದಾರೆ.

‘ಸಿದ್ದರಾಮಯ್ಯನವರೇ, ತೆರಿಗೆ ಸಂಗ್ರಹ ಕುಸಿತವಾಗಿರುವುದಕ್ಕೆ ಗ್ಯಾರೆಂಟಿ ಫಲಾನುಭವಿಗಳನ್ನು ಯಾಕೆ ಹೊಣೆ ಮಾಡುತ್ತಿದ್ದೀರಿ?ಗ್ಯಾರೆಂಟಿ ಯೋಜನೆಗಳು ರಾಜ್ಯದ ಆರ್ಥಿಕತೆಯನ್ನು ಹೆಚ್ಚಿಸುತ್ತದೆ ಎಂದು ಈ ಹಿಂದೆ ತಾವೇ ಹೇಳಿಕೊಂಡಿದ್ದೀರಿ. ಈಗ ತೆರಿಗೆ ಸಂಗ್ರಹ ಕಡಿಮೆಯಾಗುತ್ತಿದ್ದಂತೆ ಗ್ಯಾರೆಂಟಿ ಯೋಜನೆಗಳ ಮೇಲೆ ಗೂಬೆ ಕೂರಿಸಿ ಫಲಾನುಭವಿಗಳಿಗೆ ಕತ್ತರಿ ಹಾಕುವುದು ಯಾವ ನ್ಯಾಯ?’ ಎಂದು ಪ್ರಶ್ನಿಸಿದರು.

‘ಕೋವಿಡ್​ನಂತಹ ಯಾವುದೇ ಸಾಂಕ್ರಾಮಿಕ ರೋಗದ ಸವಾಲಿಲ್ಲ, ಆರ್ಥಿಕತೆಯನ್ನು ಮಂದಗೊಳಿಸುವ ಯಾವುದೇ ಭೀಕರ ನೈಸರ್ಗಿಕ ವಿಕೋಪ ಸಂಭವಿಸಿಲ್ಲ, ಯುದ್ಧ ಅಥವಾ ಇನ್ಯಾವುದೇ ರೀತಿಯ ಅನಿಶ್ಚಿತತೆ ಇಲ್ಲ. ಇಂತಹ ಅನುಕೂಲಕರ ಪರಿಸ್ಥಿತಿಯಲ್ಲಿಯೂ ಸಹ ಕರ್ನಾಟಕದಂತಹ ವಿಕಾಸಾಶೀಲ, ಸಂಪದ್ಭರಿತ ರಾಜ್ಯದಲ್ಲಿ ತೆರಿಗೆ ಸಂಗ್ರಹ ಕಡಿಮೆಯಾಗಿದೆ ಅಂದರೆ ಅದಕ್ಕೆ ತಮ್ಮ ಸರ್ಕಾರದ ದುರಾಡಳಿತ ಮತ್ತು ವೈಫಲ್ಯವೇ ಕಾರಣ. ಹೂಡಿಕೆದಾರರು, ಉದ್ದಿಮೆಗಳು ತಮ್ಮ ಮತ್ತು ತಮ್ಮ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿರುವುದೇ ಕಾರಣ’ ಎಂದರು.

‘ಈಗಲಾದರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಯಾರಾದರೂ ಸಮರ್ಥರಿಗೆ ದಾರಿ ಮಾಡಿ ಕೊಡಿ. ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ರಾಜ್ಯದ ಭವಿಷ್ಯವನ್ನ ಬಲಿ ಕೊಡಬೇಡಿ’ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *