ಕಲರ್ಸ್ ಕನ್ನಡ ಬಿಗ್‌ ಬಾಸ್‌ಗೆ ಕೋರ್ಟ್‌ ನೋಟಿಸ್‌: ಅಂತ್ಯವಾಗುತ್ತಾ ಸೀಸನ್ 11..?

ಪರಿವರ್ತನ್ ಪ್ರಭ:

ಹತ್ತು ಸೀಜನ್‌ಗಳನ್ನು ಯಶಸ್ವಿಯಾಗಿ ಮುಗಿಸಿದ್ದ ಕನ್ನಡ ಕಿರುತೆರೆಯ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡ ಈ ಬಾರಿ ಶೋ ಆರಂಭಿಸುತ್ತಿದ್ದಂತೆ ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದೆ. ಬಿಗ್‌ ಬಾಸ್‌ ಕನ್ನಡ ಸೀಜನ್‌ 11ಕ್ಕೆ ಒಂದಾದ ಮೇಲೆ ಒಂದು ವಿಘ್ನಗಳು ಎದುರಾಗುತ್ತಿದೆ.

ಒಂದೆಡೆ ಸ್ಪರ್ಧಿಗಳ ಮಿತಿ ಮೀರಿದ ವರ್ತನೆ ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾದರೆ ಮತ್ತೊಂದೆಡೆ ಬಿಗ್‌ ಬಾಸ್‌ ಸ್ಪರ್ಧಿ ಆಯ್ಕೆ ಮತ್ತು ಆಯೋಜನೆ ವಿಚಾರವಾಗಿ ಕನ್ನಡ ಬಿಗ್‌ ಬಾಸ್‌ ತಂಡಕ್ಕೆ ಪದೇ ಪದೇ ಕಾನೂನಿನ ಸಂಕಷ್ಟ ಎದುರಾಗುತ್ತಿದೆ.

ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಮಹಿಳಾ ಸ್ಪರ್ಧಿಗಳ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ಮಹಿಳಾ ಆಯೋಗಕ್ಕೆ ಪತ್ರದ ಮೂಲಕ ದೂರು ನೀಡಲಾಗಿತ್ತು. ಜೊತೆಗೆ ಶೋನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಕೂಡ ದೂರು ಸಲ್ಲಿಸಲಾಗಿತ್ತು. ಈ ದೂರುಗಳ ಮೇಲೆ ಈ ಬಾರಿ ವಿಶೇಷ ಎನ್ನುವಂತೆ ಮಾಡಿದ್ದ ಸ್ವರ್ಗ-ನರಕ ಕಲ್ಪನೆಗೆ ಅಂತ್ಯ ಹಾಡಲಾಗಿತ್ತು. ಇದೀಗ ಮತ್ತೊಂದು ಕಾನೂನು ಸಂಕಷ್ಟ ಎದುರಿಸುವಂತಾಗಿದೆ.

ಬಿಗ್ ​ಬಾಸ್​ ಶೋಗೆ ಸಾಗರ ಕೋರ್ಟ್​ ತುರ್ತು ನೋಟಿಸ್ ಜಾರಿ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಬಿಗ್ ​ಬಾಸ್ ಕನ್ನಡ ಸೀಸನ್- 11ರ ಪ್ರಸಾರವನ್ನು ಕಾಯಂ ರದ್ದುಪಡಿಸುವಂತೆ ಕೋರಿ ಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು ಎನ್ನಲಾಗಿದೆ. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಸಿವಿಲ್ ಕಾರ್ಯವಿಧಾನದ ಕೋಡ್ ಕಾಯ್ದೆ ಅಡಿ ನೋಟಿಸ್ ಜಾರಿ ಮಾಡಿದ್ದು, ಕಲರ್ಸ್ ಕನ್ನಡ ವಾಹಿನಿಯ ನಿರ್ಮಾಪಕರು ಹಾಗೂ ಸಂಪಾದಕರಿಗೆ ತುರ್ತು ನೋಟಿಸ್ ನೀಡಿದೆ ಎನ್ನಲಾಗಿದೆ. ಇನ್ನು ಅರ್ಜಿ ವಿಚಾರಣೆ ಅಕ್ಟೋಬರ್ 28 ರಂದು ನಡೆಯಲಿದ್ದು ಈ ಕೋರ್ಟ್‌ ವಿಚಾರಣೆಗೆ ವಾಹಿನಿಯವರು ಹಾಜರಾಗಬೇಕಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *