ಪರಿವರ್ತನ ಪ್ರಭಾ:
ಜಮ್ಮು: ದಶಕಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆದಿದ್ದು, ಸರ್ಕಾರ ರಚನೆಗೆ ವೇದಿಕೆ ಸಿದ್ಧವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಸರ್ಕಾರ ರಚಿಸಲು ಸಿದ್ಧವಾಗಿದ್ದು, ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಶ್ರೀನಗರದ ರಾಜಭವನದಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಭೇಟಿಯಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.
ರಾಜಭವನ ಭೇಟಿ ಬಳಿಕ ಮಾತನಾಡಿದ ಒಮರ್ ಅಬ್ದುಲ್ಲಾ, ಲೆಫ್ಟಿನೆಂಟ್ ಗವರ್ನರ್ ಅವರನ್ನು ಭೇಟಿ ಮಾಡಿ ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಸಿಪಿಐ (ಎಂ), ಮತ್ತು ಸ್ವತಂತ್ರ ಅಭ್ಯರ್ಥಿಗಳು ಬೆಂಬಲ ನೀಡಿರುವ ಪತ್ರಗಳನ್ನು ಸಲ್ಲಿಸಿದ್ದೇನೆ. ಶಾಸಕರು ಪ್ರಮಾಣ ವಚನ ಸ್ವೀಕರಿಸಲು ಮತ್ತು ಸರ್ಕಾರ ರಚನೆಗೆ ದಿನಾಂಕ ನಿಗದಿಪಡಿಸುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದರು. ಒಮರ್ ಅಬ್ದುಲ್ಲಾ ಕಾಶ್ಮೀರದ ಬುದ್ಗಾಮ್ ಮತ್ತು ಗಂದರ್‌ಬಲ್ ಎಂಬ ಎರಡು ಕ್ಷೇತ್ರಗಳಿಂದ ಕೂಡ ಗೆಲುವು ಸಾಧಿಸಿದ್ದಾರೆ.
"ಜಮ್ಮು ಮತ್ತು ಕಾಶ್ಮೀರ ಈಗ ಕೇಂದ್ರಾಡಳಿತ ಪ್ರದೇಶವಾಗಿದೆ, ಸದ್ಯ ಇಲ್ಲಿ ಕೇಂದ್ರ ಸರ್ಕಾರದ ಆಡಳಿತ ಜಾರಿಯಲ್ಲಿದ್ದು, ಲೆಫ್ಟಿನೆಂಟ್ ಗವರ್ನರ್ ಮೊದಲು ದಾಖಲೆಗಳನ್ನು ಸಿದ್ಧಪಡಿಸಿ ರಾಷ್ಟ್ರಪತಿ ಭವನಕ್ಕೆ ಕಳಿಸಬೇಕು. ಅಲ್ಲಿಂದ ಗೃಹ ಸಚಿವಾಲಯಕ್ಕೆ ತೆರಳಲಿದ್ದು, ಗೃಹ ಸಚಿವಾಲಯ ತನ್ನ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ದಾಖಲೆಗಳನ್ನು ವಾಪಸ್ ಮಾಡಲಿದೆ. ಈ ಪ್ರಕ್ರಿಯೆ ಮುಗಿಯಲು ಎರಡರಿಂದ ಮೂರು ದಿನಗಳು ಬೇಕಾಗುತ್ತದೆ ಎಂದು ಒಮರ್ ಅಬ್ದುಲ್ಲಾ ಮಾಹಿತಿ ನೀಡಿದ್ದಾರೆ.
Post Views: 18