ಪರಿವರ್ತನ ಪ್ರಭಾ:
ಶಿವಮೊಗ್ಗದಲ್ಲಿ ಧಾರಾಕಾರ ಮಳೆಯಿಂದಾಗಿ ದೊಡ್ಡ ಅವಾಂತರವೇ ಸೃಷ್ಟಿಯಾಗಿದೆ. ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಹಲವೆಡೆ ಮನೆಗಳಿಗೆ ಮಳೆ ನೀರು ನುಗ್ಗಿದೆ. ಕಳೆದ ಕೆಲ ದಿನಗಳಿಂದ ಭದ್ರಾವತಿ ತಾಲೂಕಿನಲ್ಲಿ ಮಳೆ ಅಬ್ಬರ ಜೋರಾಗಿದೆ. ನಿರಂತರ ಮಳೆಗೆ ರಸ್ತೆಗಳು, ಮನೆಗಳು ಜಲಾವೃತಗೊಂಡು ಊರಿಗೂರೇ ಹಬ್ಬದ ಕಳೆ ಕಳೆದುಕೊಂಡಿದೆ.
ಹೌದು… ಇಂದು ದಸರಾ ಹಬ್ಬ. ಹಬ್ಬದ ಹಿನ್ನೆಲೆ ಮನೆ, ಕಚೇರಿಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ಜನ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಆದರೆ ಬೆಳಗ್ಗೆಯಿಂದ ಶುರುವಾದ ಮಳೆಯಿಂದಾಗಿ ಜನ ಮನೆ ಬಿಟ್ಟು ಹೊರಬರಲು ಹಿಂದೇಟು ಹಾಕುವಂತಹ ಸ್ಥಿತಿ ನಿರ್ಮಾಣವಾಗಿದೆ.
ಮಳೆ ಮುಂದುವರೆದ ಹಿನ್ನೆಲೆ ಚರಂಡಿಗಳು ತುಂಬಿ ಹರಿಯುತ್ತಿವೆ. ಚರಂಡಿ ತುಂಬಿದ ಪರಿಣಾಮ ರಸ್ತೆ ಮೇಲೆ ಮಳೆಯ ನೀರು ತುಂಬಿ ಹರಿಯುತ್ತಿದೆ. ಹೀಗಾಗಿ ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ. ಅಲ್ಲದೆ ಭದ್ರಾವತಿ ನಗರದ ಜನ್ನಾಪುರದ ಕಿತ್ತೂರು ರಾಣಿ ಚೆನ್ನಮ್ಮ ಬ್ಲಾಕ್‌ನ ಮನೆಯೊಂದರ ಕಾಂಪೌಂಡ್ ಗೋಡೆ ಕುಸಿದು ಮನೆಗಳಿಗೆ ನುಗ್ಗಿರುವ ನೀರನ್ನು ಹೊರ ಹಾಕಲು ಜನರು ಹರಸಾಹಸ ಪಡುತ್ತಿದ್ದಾರೆ.
ಶಿವಮೊಗ್ಗದಲ್ಲಿ ಒಂದೆಡೆ ಮಳೆ ಜೋರಾಗಿದ್ದರೆ ಮತ್ತೊಂದೆಡೆ ರಾಜ್ಯದ ಎರಡನೇ ಅತಿದೊಡ್ಡ ಶಿವಮೊಗ್ಗ ದಸರಾ ಜಂಬೂ ಸವಾರಿ ಮೆರವಣಿಗೆ ಆರಂಭವಾಗಿದೆ. ಶಿವಪ್ಪನಾಯಕ ಅರಮನೆಯಿಂದ ದಸರಾ ಜಂಬೂ ಸವಾರಿ ಅದ್ದೂರಿಯಾಗಿ ಆರಂಭಗೊಂಡಿದೆ.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಜಂಬೂ ಸವಾರಿಗೆ ಚಾಲನೆ ನೀಡಿದರು. ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಸಂಬೂ ಸವಾರಿಗೆ ಚಾಲನೆ ನೀಡಲಾಯಿತು. ಸಾಗರ್ ಆನೆ ಬೆಳ್ಳಿ ಅಂಬಾರಿ ಹೊತ್ತಿದೆ. ಬಾಲಣ್ಣ ಮತ್ತು ಬಹದ್ದೂರ್ ಎಂಬ ಆನೆಗಳು ಸಾಗರ್ ಆನೆಗೆ ಸಾಥ್ ನೀಡಿವೆ. 650 ಕೆಜಿಯ ಬೆಳ್ಳಿ ಅಂಬಾರಿಯಲ್ಲಿ ಚಾಮುಂಡೇಶ್ವರಿಯ ಮೆರವಣಿಗೆ ಮಾಡಲಾಗುತ್ತಿದೆ. ಶಾಸಕ ಚನ್ನಬಸಪ್ಪ, ಡಿಸಿ, ಎಸ್ಪಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ.
ಕಳೆದ ರಾತ್ರಿ ಕೂಡ ಎರಡು ಗಂಟೆಗೂ ಹೆಚ್ಚು ಕಾಲ ಶಿವಮೊಗ್ಗದ ಭದ್ರಾವತಿ ತಾಲೂಕಿನಲ್ಲಿ ಎಡಬಿಡದೆ ಧಾರಾಕಾರವಾಗಿ ಮಳೆ ಸುರಿದಿದೆ. ಇದರಿಂದಾಗಿ ರಸ್ತೆಗಳ ಮೇಲೆ ನೀರು ಉಕ್ಕಿ ಹರಿಯುತ್ತಿರುವ ದೃಶ್ಯಗಳು ಕಂಡು ಬಂದಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಳೆಯ ಆರ್ಭಟಕ್ಕೆ ಭದ್ರಾವತಿ ಪಟ್ಟಣದ ಬಸವೇಶ್ವರ ಸರ್ಕಲ್ ಜಲಾವೃತಗೊಂಡಿದೆ. ತಗ್ಗುಪ್ರದೇಶದ ಮನೆಗಳಿಗೆ ಮಳೆಯ ನೀರು ನುಗ್ಗಿದೆ. ಭದ್ರಾವತಿ ಪಟ್ಟಣದ ಭೂತನಗುಡಿ ಬಡಾವಣೆಯಲ್ಲಿ ಅಂಗಡಿ, ಮನೆಗಳಿಗೆ ಮಳೆಯ ನೀರು ನುಗ್ಗಿ ದೊಡ್ಡ ಅವಾಂತರವೇ ಸೃಷ್ಟಿಯಾಗಿದೆ. ಬಿಟ್ಟು ಬಿಡದೇ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನವೇ ಅಸ್ತವ್ಯಸ್ತಗೊಂಡಿದೆ.
ಇನ್ನೂ ಚಿಕ್ಕಮಗಳೂರಿನಲ್ಲೂ ಭಾರೀ ಮಳೆಯಾಗುತ್ತಿದ್ದು, ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕುದುರೆಮುಖ, ಸಂಸೆ, ಹೊರನಾಡು ಸುತ್ತಮುತ್ತ ಮಳೆ ಅಬ್ಬರ ಜೋರಾಗಿದೆ. ಕಳಸ ಪಟ್ಟಣದಲ್ಲೂ ಮಳೆ ಅರ್ಭಟ ಶುರುವಾಗಿದೆ. ಭಾರಿ ಮಳೆಯಿಂದಾಗಿ ಕಾಫಿ-ಅಡಿಕೆ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ.
ತೋಟಗಳಿಂದ ಮಳೆ ನೀರು ರಸ್ತೆಗೆ ನುಗ್ಗುತ್ತಿದ್ದು ಚಾರ್ಮಾಡಿ ಘಾಟ್ ತಪ್ಪಲಿನಲ್ಲೂ ಭಾರೀ ಮಳೆಯಿಂದಾಗಿ ಪ್ರವಾಸಿಗರು ಪರದಾಡುವಂತಾಗಿದೆ. 3-4 ದಿನದಿಂದ ಮಧ್ಯಾಹ್ನದ ಬಳಿಕ ಕಾಫಿನಾಡಲ್ಲಿ ನಿತ್ಯ ಮಳೆ ಸುರಿಯುತ್ತಿದೆ. ಮಲೆನಾಡಿನಾದ್ಯಂತ ಬೆಳೆಗ್ಗೆಯಿಂದಲೂ ಮೋಡ ಕವಿದ ವಾತವರಣ ಆವರಿಸುತ್ತಿದ್ದು, ಮುಂದಿನ ಮೂರ್ನಾಲ್ಕು ದಿನ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯದ ಹಲವೆಡೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.