ಪರಿವರ್ತನ ಪ್ರಭಾ:
ಮುಂಗಡವಾಗಿ ಸಾಲದ ಕಂತುಗಳನ್ನು ಕಟ್ಟಿದರೆ, ಅಥವಾ ಅವಧಿಗಿಂತ ಮುಂಚಿತವಾಗಿ ಸಾಲ ತೀರಿಸಿದರೆ ದಂಡ ವಿಧಿಸಲಾಗುತ್ತದೆ. ಫ್ಲೋಟಿಂಗ್ ರೇಟ್ನಲ್ಲಿ ಪಡೆದ ಸಾಲಕ್ಕೆ ಪೆನಾಲ್ಟಿ ಚಾರ್ಜ್ಗಳಿರುವುದಿಲ್ಲ. ಇದು ಬಿಸಿನಸ್ ಅಲ್ಲದ ಇತರ ವೈಯಕ್ತಿಕ ಗ್ರಾಹಕ ಲೋನ್ಗಳಿಗೆ ಅನ್ವಯ ಆಗುತ್ತದೆ. ಈಗ ಈ ವಿನಾಯಿತಿ ಸೌಲಭ್ಯವನ್ನು ಸಣ್ಣ ಹಾಗೂ ಕಿರು ಉದ್ದಿಮೆಗಳಿಗೂ ವಿಸ್ತರಿಸಲಾಗಿದೆ. ಆರ್ಬಿಐ ಗವರ್ನರ್ ಶಕ್ತಿಕಾಂತದಾಸ್ ಇಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ್ದಾರೆ. ಗ್ರಾಹಕರ ಹಿತಾಸಕ್ತಿಗೆ ಅನುಗುಣವಾಗಿ ರಿಸರ್ವ್ ಬ್ಯಾಂಕ್ ಹಲವು ಕ್ರಮಗಳನ್ನು ಈ ಹಿಂದೆ ತೆಗೆದುಕೊಂಡಿದೆ. ಇದೇ ಹಾದಿಯಲ್ಲಿ ಒಂದಷ್ಟು ಮಾರ್ಗಸೂಚಿಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಫ್ಲೋಟಿಂಗ್ ರೇಟ್ ಎಂದರೆ ಸಾಲದ ಅವಧಿಯಲ್ಲಿ ಬ್ಯಾಂಕಿನ ಬಡ್ಡಿದರ ಬದಲಾದರೆ, ಅದು ಸಾಲಕ್ಕೂ ಅನ್ವಯ ಆಗುತ್ತದೆ. ಫಿಕ್ಸೆಡ್ ರೇಟ್ನಲ್ಲಿ ಸಾಲ ಪಡೆದಿದ್ದರೆ ಆರಂಭದಿಂದ ಹಿಡಿದು ಕೊನೆಯವರೆಗೂ ಏಕರೀತಿಯ ಬಡ್ಡಿ ಅನ್ವಯ ಆಗುತ್ತದೆ.
ಆರ್ಟಿಜಿಎಸ್, ಎನ್ಇಎಫ್ಟಿಯಲ್ಲಿ ಬೆನಿಫಿಶಿಯರಿ ಹೆಸರು ಪರಿಶೀಲನೆಗೆ ಅವಕಾಶ
ಯುಪಿಐ ಮತ್ತು ಐಎಂಪಿಎಸ್ನಲ್ಲಿ ನೀವು ಯಾರಿಗಾದರೂ ಹಣ ಕಳುಹಿಸುವಾಗ ಅವರ ಬ್ಯಾಂಕ್ ಖಾತೆಯಲ್ಲಿರುವ ಹೆಸರನ್ನು ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳಬಹುದು. ಆದರೆ, ಆರ್ಟಿಜಿಎಸ್ ಮತ್ತು ಎನ್ಇಎಫ್ಟಿ ಮೂಲಕ ಹಣ ವರ್ಗಾವಣೆ ಮಾಡುವಾಗ ವ್ಯಕ್ತಿಯ ಹೆಸರು ಮತ್ತು ಅಕೌಂಟ್ ಅನ್ನು ಖಾತ್ರಿಪಡಿಸಿಕೊಳ್ಳುವ ಅವಕಾಶ ಇರಲಿಲ್ಲ. ಇದರಿಂದ ತಪ್ಪಾದ ವ್ಯಕ್ತಿಗೆ ಹಣ ವರ್ಗಾವಣೆ ಆಗಿ ಹೋಗುವ ಸಂಭಾವ್ಯತೆ ಇರುತ್ತದೆ. ಇದನ್ನು ತಪ್ಪಿಸಲು ಈಗ ಆರ್ಟಿಜಿಎಸ್ ಮತ್ತು ಎನ್ಇಎಫ್ಟಿಯಲ್ಲೂ ಹೆಸರು ಪರಿಶೀಲಿಸುವ ಸೌಲಭ್ಯವನ್ನು ತರಲು ಆರ್ಬಿಐ ನಿರ್ಧರಿಸಿದೆ.
ನೀವು ಹಣ ಪಾವತಿಸುವ ಮುನ್ನ ಬೆನಿಫಿಶಿಯರಿಯ ಹೆಸರನ್ನು ದೃಢಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ತಪ್ಪಾದ ವ್ಯಕ್ತಿಗೆ ಹಣ ವರ್ಗಾವಣೆ ಆಗುವುದು ತಪ್ಪುತ್ತದೆ.
ನೀವು ಆರ್ಟಿಜಿಎಸ್ ಅಥವಾ ಎನ್ಇಎಫ್ಟಿಯಲ್ಲಿ ಹಣ ಪಾವತಿಸುವಾಗ ವ್ಯಕ್ತಿಯ ಅಕೌಂಟ್ ನಂಬರ್ ಮತ್ತು ಐಎಫ್ಎಸ್ಸಿ ಕೋಡ್ ಅನ್ನು ನಮೂದಿಸಿದಾಗ, ಬ್ಯಾಂಕ್ಗೆ ಜೋಡಿತವಾದ ಆ ವ್ಯಕ್ತಿಯ ಹೆಸರು ಕಾಣಿಸುತ್ತದೆ. ಇದರಿಂದ ಸರಿಯಾದ ವ್ಯಕ್ತಿಗೆ ಹಣ ಪಾವತಿ ಆಗುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳಬಹುದು. ಈ ಬಗ್ಗೆ ವಿವರವಾದ ಮಾರ್ಗಸೂಚಿಗಳನ್ನು ಪ್ರತ್ಯೇಕವಾಗಿ ನೀಡಲಾಗುವುದು ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತದಾಸ್ ಮಾಹಿತಿ ನೀಡಿದ್ದಾರೆ.
Post Views: 103